ಪ್ರಮುಖ ಸುದ್ದಿ

ಆರೋಗ್ಯ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅಗತ್ಯ : ಡಿಎಚ್‍ಒ ಡಾ.ಮೋಹನ್ ಸಲಹೆ

ರಾಜ್ಯ( ಮಡಿಕೇರಿ) ಫೆ.19 :- ಸರ್ಕಾರದಿಂದ ಸಾರ್ವಜನಿಕರ ಆರೋಗ್ಯ ನಿರ್ವಹಣೆಗಾಗಿ ಹಲವಾರು ಯೋಜನೆಗಳಿವೆ, ಈ ಯೋಜನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅಗತ್ಯವೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಅವರು ಸಲಹೆ ಮಾಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಯೂತ್‍ರೆಡ್ ಕ್ರಾಸ್, ರೆಡ್ ರಿಬ್ಬನ್ ಘಟಕದ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಮಾಹಿತಿ, ಶಿಕ್ಷಣ ಮಾಹಿತಿ ಅರಿವು ಕಾರ್ಯಕ್ರಮದಡಿ ರಾಷ್ಟ್ರೀಯ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಪ್ರಮುಖ ಪ್ರೇರಣಾದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಮತ್ತು ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರವು ದೇಶದ ಜನರ ಆರೋಗ್ಯ ನಿರ್ವಹಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಈ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಂಡು ಇತರರಿಗೂ ಮಾಹಿತಿ ವಿನಿಮಯ ಮಾಡಬೇಕು ಎಂದರು.
ಹದಿಹರೆಯದವರಲ್ಲಿ ರಕ್ತಹೀನತೆ, ಮಾನಸಿಕ ಖಿನ್ನತೆಯಂತಹ ಸಮಸ್ಯೆಗಳು ಇರುತ್ತವೆ. ಅಲ್ಲದೆ ಡೆಂಗ್ಯೂ, ಚಿಕನ್ ಗುನ್ಯ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ಕಾಯಿಲೆಗಳು ಬಾರದಂತೆ ವಿದ್ಯಾರ್ಥಿಗಳು ಎಚ್ಚರವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಸಾಕಷ್ಟು ತೊಂದರೆಯುಂಟುಮಾಡುತ್ತಿದೆ. ಇಂತಹ ಖಾಯಿಲೆಗಳ ಬಗ್ಗೆ ಭಯ ಪಡುವುದಕ್ಕಿಂತ ಮುನ್ನೆಚ್ಚರಿಕೆ ವಹಿಸಬೇಕು. ಜೊತೆಗೆ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಎಲ್ಲಾ ವರ್ಗದ ಜನರಿಗೂ ಉತ್ತಮ ಆರೋಗ್ಯ ನೀಡುವ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿವೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‍ಗಳನ್ನು ಎಲ್ಲರೂ ಪಡೆಯುವಂತಾಗಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್ ಅವರು, ಸರ್ಕಾರದ ಯೋಜನೆಗಳ ಬಗ್ಗೆ ಅರಿತಿರಬೇಕು. ಕಾಯಿಲೆ ಬಂದಾಗ ಗಾಬರಿ ಪಡದೆ ಸೂಕ್ತ ಚಿಕಿತ್ಸೆ ಪಡೆಯಬೇಕು. ನಗರದ ಜಿಲ್ಲಾಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಈಗಾಗಲೇ ಕಾರ್ಡ್ ವಿತರಣಾ ಕಾರ್ಯ ನಡೆಯುತ್ತಿದೆ. ಆಧಾರ್, ಬಿಪಿಎಲ್ ಕಾರ್ಡ್‍ಗಳೊಂದಿಗೆ ಆಸ್ಪತ್ರೆಯ 6 ನೇ ಕೊಠಡಿಗೆ ತೆರಳಿ ಈ ಯೋಜನೆಯ ಕಾರ್ಡ್ ಪಡೆಯಬಹುದು. ಈ ಮೂಲಕ ದೇಶದ ಎಲ್ಲ ವರ್ಗದ ಜನರೂ ಸಹ ಉತ್ತಮ ಚಿಕಿತ್ಸೆಯನ್ನು ಸರ್ಕಾರಿ ಮತ್ತು ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ ಅವರು ಮಾತನಾಡಿ, ದೇಶದ ಅಭಿವೃದ್ಧಿಯಾಗಬೇಕೆಂದರೆ ದೇಶದ ಜನರ ಆರೋಗ್ಯ ಸ್ವಸ್ಥವಾಗಿರಬೇಕು. ಈ ನಿಟ್ಟಿನಲ್ಲಿ ರಾಷ್ಟ್ರದ ಜನರ ಆರೋಗ್ಯವನ್ನು ಕಾಪಾಡಲು ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಇವುಗಳ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಚಿತ್ರಾ ಅವರು, ಸ.ಪ್ರ.ದ.ಕಾಲೇಜಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ. ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಅವರು, ಜಿಲ್ಲಾ ಆರ್.ಸಿ.ಎಚ್ ಮತ್ತು ಎನ್.ಎಚ್.ಎಂ ಕಾರ್ಯಕ್ರಮದಡಿಯಲ್ಲಿ ಜನನಿ ಸುರಕ್ಷಾ ಯೋಜನೆ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮ, ಶುಚಿ, ನಗು-ಮಗು 108 ತುರ್ತು ವಾಹನ ಸೇವೆಗಳ ಬಗ್ಗೆ ಪಿ.ಪಿ.ಟಿ, ಮುಖಾಂತರ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ.ದಯಾನಂದ್, ಆರ್.ಸಿ.ಎಚ್ ಅಧಿಕಾರಿ ಡಾ.ಗೋಪಿನಾಥ್, ಡಾ.ಮಹದೇವಪ್ಪ, ಡಾ.ಅಮೃತ ಬಿಂದು ಸೇರಿದಂತೆ ಇತರರು ಹಾಜರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್ ಅವರು ಸ್ವಾಗತಿಸಿ, ವಂದಿಸಿ, ನಿರೂಪಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: