ಮೈಸೂರು

ಶ್ರೀನಿವಾಸ್ ಪ್ರಸಾದ್ ಅವರ ಪ್ರತಿಷ್ಠೆಗಾಗಿ ಚುನಾವಣೆ ಬಂದಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ

ಶ್ರೀನಿವಾಸ್ ಪ್ರಸಾದ್ ಅವರು ರಾಜೀನಾಮೆ ಕೊಡುವ ಅಗತ್ಯವೇ ಇರಲಿಲ್ಲ. ಶ್ರೀನಿವಾಸ್ ಪ್ರಸಾದ್ ಅವರ ಪ್ರತಿಷ್ಠೆಗಾಗಿ ಚುನಾವಣೆ ಬಂದಿದೆ. ಬರಗಾಲದಲ್ಲಿ ಚುನಾವಣೆ ಮಾಡುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಂಜನಗೂಡಿನಲ್ಲಿ ನಡೆದ  ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ಉಪಚುನಾವಣೆ ಅನಾವಶ್ಯಕವಾಗಿ ಬಂದ ಚುನಾವಣೆಯಾಗಿದೆ.ಶ್ರೀನಿವಾಸ್ ಪ್ರಸಾದ್ ಅವರು ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ.ಇದಕ್ಕೆ ಶ್ರೀನಿವಾಸ್‌ಪ್ರಸಾದ್ ಅವರೇ ಉತ್ತರ ನೀಡಬೇಕಿದೆ. ಅವರು ನನ್ನನ್ನು ಕುರಿತು ಏಕವಚನದಲ್ಲೇ ಮಾತನಾಡಿದ್ದಾರೆ, ಆದರೆ ನಾನು ಆ ಕೆಲಸ ಮಾಡೋಲ್ಲ. ರಾಜಕೀಯದಲ್ಲಿ ಒಂದು ಸಂಸ್ಕೃತಿಯನ್ನು ಎಲ್ಲರೂ ಕಲಿಯಬೇಕಿದೆ. ಅದನ್ನು ಶ್ರೀನಿವಾಸ್ ಪ್ರಸಾದ್ ಅವರೂ ಕಲಿಯಬೇಕಿದೆ ಎಂದರು.
ಸಮಾವೇಶದಲ್ಲಿ ಬಿಎಸ್‌ಯಡಿಯೂರಪ್ಪ  ವಿರುದ್ದ ವಾಗ್ದಾಳಿ ನಡೆಸಿದ ಅವರು ಉಪಚುನಾವಣೆಯಲ್ಲಿ ಧರ್ಮ ಅಧರ್ಮ ಬಗ್ಗೆ ಮಾತನಾಡುತ್ತಿದ್ದಾರೆ. ಅದು ಭೂತದ ಬಾಯಲ್ಲಿ ಮಂತ್ರ ಕೇಳಿದಂತಾಗುತ್ತಿದೆ. ನೀವು ನಿಮ್ಮ ಆಡಳಿತದ ದಿನಗಳನ್ನು ಒಮ್ಮೆ ನೋಡಿಕೊಂಡರೇ ನಿಮಗೆ ಎಲ್ಲವು ಅರ್ಥವಾಗುತ್ತೆ. ನಿಮ್ಮ ಕಾಲದಲ್ಲಿ ಜೈಲಿಗೆ ಹೋಗಿದ್ದು ನೆಂಟಸ್ಥನ ಮಾಡೋಕಾ ಎಂದು ಪ್ರಶ್ನಿಸಿದರು.
ಮಾತಿನ ಭರದಲ್ಲಿ ಬಿಜೆಪಿ ಹೇಳುವ ಬದಲು ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೂ ನಮಗೂ ನೇರ ಹೋರಾಟವಿದೆ ಎಂದು ಹೇಳುವ ಮೂಲಕ ಕ್ಷಣಕಾಲ ಎಲ್ಲರನ್ನೂ ತಬ್ಬಿಬ್ಬುಗೊಳಿಸಿದರು. ತಕ್ಷಣ ತಮ್ಮ ತಪ್ಪಿನ ಅರಿವಾಗಿ ಬಿಜೆಪಿಗೂ ನಮಗೂ ನೇರ ಹೋರಾಟವಿದೆ ಎಂದು ತಿದ್ದಿಕೊಂಡರು.

ಸಮಾವೇಶದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್, ಬಸವರಾಜರಾಯರೆಡ್ಡಿ, ಸಂಭಾವ್ಯಅಭ್ಯರ್ಥಿ ಕಳಲೆಕೇಶವಮೂರ್ತಿ, ಸ್ಥಳೀಯ ಶಾಸಕರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: