ಮೈಸೂರು

ಸ್ವಚ್ಛ ಸರ್ವೇಕ್ಷಣೆಗೆ ಶ್ರಮಿಸಿದ  ಪೌರಕಾರ್ಮಿಕರಿಗೆ ಉಚಿತ ಮನರಂಜನೆ ನೀಡುವ ನಿಟ್ಟಿನಲ್ಲಿ  “ಕಾಣದಂತೆ ಮಾಯವಾದನು” ಚಿತ್ರ ವಿಶೇಷ ಪ್ರದರ್ಶನ

ಮೈಸೂರು,ಫೆ.19:- ಸ್ವಚ್ಛ ನಗರಕ್ಕಾಗಿ ದುಡಿದ ಮೈಸೂರು ಪಾಲಿಕೆ ಪೌರಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಲು  “ಕಾಣದಂತೆ ಮಾಯವಾದನು” ಚಿತ್ರ ತಂಡದಿಂದ ವಿಶೇಷ ಉಚಿತ  ಪ್ರದರ್ಶನವನ್ನು ಮೈಸೂರಿನ ಉಡ್ ಲ್ಯಾಂಡ್ಸ್ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.  ಸ್ವಚ್ಛ ಸರ್ವೇಕ್ಷಣೆಗೆ ಶ್ರಮಿಸಿದ  ಪೌರಕಾರ್ಮಿಕರಿಗೆ ಉಚಿತ ಮನರಂಜನೆ ನೀಡುವ ನಿಟ್ಟಿನಲ್ಲಿ ವಿಶೇಷ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಪೌರಕಾರ್ಮಿಕರು ಭಾಗವಹಿಸಿ ಚಿತ್ರ ವೀಕ್ಷಿಸಬೇಕಾಗಿ ಚಿತ್ರ ತಂಡ ಮನವಿ ಮಾಡಿದೆ ಎಂದು ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ಪಾಲಿಕೆಯ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಚಿತ್ರದ ನಾಯಕ ನಟ ವಿಕಾಸ್ ಬ್ಯಾಕ್ ಬೆಂಚರ್ಸ್ ಮೋಷನ್ ಪಿಕ್ಚರ್ಸ್ ಸಂಸ್ಥೆ ‘ಕಾಣದಂತೆ ಮಾಯವಾದನು” ಶೀರ್ಷಿಕೆಯುಳ್ಳ ಸಿನಿಮಾವನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿದ್ದು, ಈ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೈಸೂರಿನ ಉಡ್ ಲ್ಯಾಂಡ್ಸ್ ಚಿತ್ರ ಮಂದಿರದಲ್ಲಿ ಈ ಚಿತ್ರವನ್ನು ಅತ್ಯುತ್ತಮ ಪ್ರಶಂಸೆಯೊಂದಿಗೆ ವೀಕ್ಷಿಸಲಾಗುತ್ತಿದೆ. ಈ ಸಂತೋಷ ಹಂಚಿಕೊಳ್ಳುವ ಸಲುವಾಗಿ ಚಿತ್ರತಂಡ ವಿಶೇಷ ಪ್ರದರ್ಶನ ಹಮ್ಮಿಕೊಂಡಿದ್ದು,ಫೆ.22 ಮತ್ತು 23ರಂದು ಶನಿವಾರ ಮತ್ತು ಭಾನುವಾರ ಎರಡು ದಿನ 4.30 ಮತ್ತು 7.30ರ ಪ್ರದರ್ಶನವನ್ನು ತೋರಿಸಲಾಗುತ್ತದೆ ಎಂದರು.

ಮೈಸೂರಿಗೆ ‘ಕ್ಲೀನ್ ಸಿಟಿ ಟ್ಯಾಗ್’ ಸ್ವಚ್ಛ ನಗರಿ ಎಂಬ ಬಿರುದು ಬಂದಿರುವುದು ಇಡೀ ನಾಡಿಗೆ ಹೆಮ್ಮೆಯ ವಿಷಯ. ಮೈಸೂರು ನಗರ ಪೌರಕಾರ್ಮಿಕರಿಗೆ, ಅವರು ಮಾಡಿರುವ ಶ್ಲಾಘನೀಯ ಸೇವೆಗೆ ನಮ್ಮ ಕೃತಜ್ಞತೆ ಸಲ್ಲಿಸಲು ನಮ್ಮ ಸಿನಿಮಾದ ವಿಶೆಷ ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮೇಯರ್ ತಸ್ನೀಂ, ಉಪಮೇಯರ್ ಶ್ರೀಧರ್, ಆರೋಗ್ಯಾಧಿಕಾರಿಗಳು, ಸ್ಥಾಯಿ ಸಮಿತಿಯ ಅಧ್ಯಕ್ಷರುಗಳು, ‘ಕಾಣದಂತೆ ಮಾಯವಾದನು’ ಚಿತ್ರತಂಡದ ಕೆಲವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: