ಮೈಸೂರು

ಆರು ದಿನಗಳ ಕಾಲ ‘ಗಾಂಧಿ ಪಥ’ದಲ್ಲಿ ನಡೆದ 20ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ವರ್ಣರಂಜಿತ ತೆರೆ

ಮೈಸೂರು, ಫೇ.20:- ಆರು ದಿನಗಳ ಕಾಲ ‘ಗಾಂಧಿ ಪಥ’ದಲ್ಲಿ ನಡೆದ 20ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ನಿನ್ನೆ ವರ್ಣರಂಜಿತ ತೆರೆ ಬಿದ್ದಿತು.
ಬಹುರೂಪಿ ತಡವಾಗಿ ಆರಂಭವಾದರೂ ‘ಗಾಂಧಿ ಪಥ’ದ ಮೂಲಕ ಜನರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಯಿತು. ಕಳೆದ ಬಾರಿಗಿಂತ ಹೆಚ್ಚಿನ ಜನರು ಈ ಬಾರಿ ಆಗಮಿಸಿದ್ದರು. ಆರು ದಿನಗಳ ಕಾಲ ನಡೆದ ಉತ್ಸವಕ್ಕೆ ಅಂದಾಜು ಲಕ್ಷಕ್ಕೂ ಹೆಚ್ಚು ಮಂದಿ ಸಾಕ್ಷಿಯಾಗಿದ್ದಾರೆ. ಅದರಲ್ಲಿ ಹೊಸಮುಖಗಳು ಬಹುರೂಪಿಗೆ ಆಗಮಿಸಿದ್ದು, ಅದರಲ್ಲೂ ಯುವಕರು ಪಾಲ್ಗೊಂಡಿದ್ದೇ ಜಾಸ್ತಿ.

ಆರು ವೇದಿಕೆಗಳಲ್ಲಿ ಪ್ರತಿದಿನ ನಾನಾ ಭಾಷೆಯ ನಾಟಕಗಳು, ವೈವಿಧ್ಯಮಯ ಜನಪದ ಕಾರ್ಯಕ್ರಮ, ಚಲನಚಿತ್ರೋತ್ಸವ, ಕರಕುಶಲ ಹಾಗೂ ಪುಸ್ತಕ ಪ್ರದರ್ಶನ, ಗಾಂಧಿ ಜೀವನ ಪಥದ ಛಾಯಾಚಿತ್ರಗಳ ಪ್ರದರ್ಶನ, ಕಾವ್ಯ ವಾಚನ, ಗಾಂಧಿ ಲಾವಣಿ, ಬೀದಿ ನಾಟಕ ಪ್ರದರ್ಶನದ ಮೂಲಕ ಪ್ರೇಕ್ಷಕ ವರ್ಗಕ್ಕೆ ರಸದೌತಣ ಉಣಬಡಿಸಿತು.

ಗಾಂಧಿ ವಿಚಾರ ಸಂಕಿರಣ, ಗಾಂಧಿ ಛಾಯಾಚಿತ್ರ ಪ್ರದರ್ಶನದ ಮೂಲಕ ಬಾಪುವಿನ ಸ್ಮರಿಸುವ ಜತೆಗೆ ಪುಸ್ತಕ ಮೇಳ, ದೇಶಿ ತಿನಿಸು ಮೇಳ, ಕರಕುಶಲ ಮೇಳೆ ಹೀಗೆ ನಾನಾ ಕಾರ‍್ಯಕ್ರಮದ ಮೂಲಕ ಎಲ್ಲಾ ವಯೋಮಾನದ ಮತ್ತು ವರ್ಗದ ಜನರನ್ನು ಬೆಸೆಯಿತು. ಜತೆಗೆ ‘ಗಾಂಧಿ ಪಥದ’ ಆಯಾಮವನ್ನು ತೆರೆದಿಟ್ಟಿತ್ತು.

ಉತ್ಸವಕ್ಕೆ ಮುನ್ನುಡಿಯಾಗಿ ನಡೆದ ‘ಮನೆ ಮನೆಗೆ ಗಾಂಧಿ’ ಕಾರ‍್ಯಕ್ರಮವು ರಂಗಾಯಣಕ್ಕಲ್ಲದೆ ಮನೆ ಮನೆಗೂ ಬಹುರೂಪಿಯನ್ನು ಕೊಂಡೊಯ್ದಿತು. ಗಾಂಧೀಜಿ ಮೈಸೂರಿನಲ್ಲಿ ಭೇಟಿ ನೀಡಿದ ಸ್ಥಳಗಳಲ್ಲಿ ಲಾವಣಿ ಮೂಲಕ ಬಾಪುವನ್ನು ಸ್ಮರಿಸಲಾಯಿತು. ಕವಿಕಟ್ಟೆಯಲ್ಲಿ’ಕವಿ ಕಂಡ ಗಾಂಧಿ’ ಕಾರ‍್ಯಕ್ರಮದ ಮೂಲಕ ಕವಿತೆ ವಾಚಿಸಿ ಗಾಂಧಿ ಪ್ರಸ್ತುತತೆ ಸಾರಲಾಯಿತು.
ನಾಟಕೋತ್ಸವಕ್ಕಾಗಿ ದೇಶದ ವಿವಿಧೆಡೆಯಿಂದ ಆಗಮಿಸಿದ್ದ ಸುಮಾರು ಸಾವಿರಕ್ಕೂ ಹೆಚ್ಚಿನ ಕಲಾವಿದರು ತಮ್ಮ ಕಲಾ ಶ್ರೀಮಂತಿಕೆ ಪ್ರದರ್ಶಿಸಿದರು. ಭೂಮಿಗೀತ, ವನರಂಗ, ಕಲಾಮಂದಿರ, ಕಿರುರಂಗಮಂದಿರ ವೇದಿಕೆಗಳಲ್ಲಿ ಕನ್ನಡದ 10 ಹಾಗೂ ಭಾರತದ ವಿವಿಧ ಭಾಷೆಯ 11, ಯಕ್ಷಗಾನ ಪ್ರಸಂಗಗಳು 2, ಬಯಲಾಟ ಹಾಗೂ ತೊಗಲುಗೊಂಬೆಯಾಟ ಸೇರಿದಂತೆ ಒಟ್ಟು 25 ನಾಟಕಗಳು ಪ್ರದರ್ಶನಗೊಂಡಿದ್ದು, ಮುಖ್ಯಮಂತ್ರಿ ಚಂದ್ರು ಅಭಿನಯದ ಮುಖ್ಯಮಂತ್ರಿ ನಾಟಕ ಬಹುರೂಪಿ ನಾಟಕೋತ್ಸವದಲ್ಲೇ ನಂಬರ್‌ 1 ಆಗಿ ಹೊರಹೊಮ್ಮಿತು.
ಬಹುರೂಪಿ ನಾಟಕೋತ್ಸವದ ಅಂತಿಮ ದಿನವಾದ ನಿನ್ನೆ ರಂಗಾಯಣದ ಅಂಗಳ ಕಾಲಿಡಲು ಸಾಧ್ಯವಾಗದ ರೀತಿಯಲ್ಲಿ ರಂಗಾಸಕ್ತರಿಂದ ಕಿಕ್ಕಿರಿದು ತುಂಬಿತ್ತು.
ರಂಗಾಯಣದ ಜಂಟಿ ನಿರ್ದೇಶಕ ವಿ.ಎಸ್‌.ಮಲ್ಲಿಕಾರ್ಜುನ ಸ್ವಾಮಿ ಪ್ರತಿಕ್ರಿಯಿಸಿ ಈ ಬಾರಿ 7ಲಕ್ಷ ರೂಪಾಯಿಗಿಂತ ಹೆಚ್ಚು ಟಿಕೆಟ್‌ ಹಣ ಸಂಗ್ರಹವಾಗಿರುವ ಅಂದಾಜಿದೆ. ಇದು ಕಳೆದ ಬಾರಿಗಿಂತ ಹೆಚ್ಚಿದೆ. ಅಲ್ಲದೆ, ಹೊಸಮುಖಗಳು ಮತ್ತು ಯುವಕರು ರಂಗಯಣದ ಕಡೆಗೆ ಮುಖ ಮಾಡಿರುವುದು ಸಂತಸ ತಂದಿದೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: