
ಪ್ರಮುಖ ಸುದ್ದಿಮೈಸೂರು
ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನೇಮಕಾತಿ ಅಕ್ರಮ: ಎಚ್.ಜನಾರ್ಧನ್
ಮೈಸೂರು,ಫೆ.20-ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಅಕ್ರಮವಾಗಿ ನಿರ್ದೇಶಕರಾಗಿ ನೇಮಕವಾಗಿದ್ದಾರೆ ಎಂದು ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್ (ಜನ್ನಿ) ಆರೋಪಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣ ಸ್ವಾಯತ್ತ ಸಂಸ್ಥೆಯಾಗಿದೆ. ನಿರ್ದೇಶಕರ ಆಯ್ಕೆ ರಂಗ ಸಮಾಜದ ಮೂಲಕ ಆಗುತ್ತೆ. ಆದರೆ ರಂಗ ಸಮಾಜದಲ್ಲಿ ಅಡ್ಡಂಡ ಕಾರ್ಯಪ್ಪ ಹೆಸರು ಪ್ರಸ್ತಾಪವೇ ಆಗಿಲ್ಲ. ರಂಗಾಯಣ ನಿರ್ದೇಶಕರಾಗಲು ಅನೇಕ ಮಾನದಂಡ ಇದೆ. ಆ ಮಾನದಂಡ ಅಡ್ಡಂಡ ಕಾರ್ಯಪ್ಪನಿಗೆ ಇಲ್ಲ. ಆದರೂ ಏಕಾಏಕಿ ಅಡ್ಡಂಡ ಕಾರ್ಯಪ್ಪನನ್ನ ನಿರ್ದೇಶಕನಾಗಿ ಆಯ್ಕೆಯಾಗಿದ್ದಾರೆ. ಅಡ್ಡಂಡ ಕಾರ್ಯಪ್ಪ ರಾಜಕೀಯವಾಗಿ ನಿರ್ದೇಶಕರಾಗಿ ನೇಮಕವಾಗಿದ್ದಾರೆ ಎಂದು ಆಪಾದಿಸಿದರು.
ರಂಗಾಯಣಕ್ಕೆ ಕೊರೊನಾ ವೈರಸ್ ಬಂದಿದೆ. ಅಲ್ಲಿನ ಕಲಾವಿದರು ಈ ಕೊರೊನಾದಿಂದ ತಪ್ಪಿಸಿಕೊಳ್ಳಬೇಕಿದೆ. ಯಾರು ಕೂಡ ಈ ವೈರಸ್ ಗೆ ಬಲಿಯಾಗಬಾರದು. ಹಾಗಾಗಿ ನಾವು ಈ ವೈರಸ್ ಬಗ್ಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಅಡ್ಡಂಡ ಕಾರ್ಯಪ್ಪ ಅವರನ್ನು ಕೊರೊನಾ ವೈರಸ್ ಗೆ ಹೋಲಿಸಿದ್ದಾರೆ.
ಆತ ನನ್ನನ್ನ ವೈಯಕ್ತಿಕವಾಗಿ ತೇಜೋವಧೆ ಮಾಡಿದ್ದಾರೆ. ನನ್ನ ಆಹಾರ ಪದ್ದತಿ ಹಾಗೂ ಜೀವನ ಶೈಲಿ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ರಂಗಾಯಣ ನಿರ್ದೇಶಕನಾಗಿ ಹೀಗೆ ಮಾತಾಡೋದು ತಪ್ಪು ಎಂದು ಗೊತ್ತಿಲ್ವಾ? ನನ್ನ ಪತ್ನಿ ಹಾಗೂ ಮಗನ ಬಗ್ಗೆ ಮಾತಾಡಿದ್ದೀರಾ ಇದು ಎಷ್ಟು ಸರಿ? ನನ್ನ ಮಗ ಒಂದು ಹಾಡು ಹಾಡಿದ್ರೆ 25 ಸಾವಿರ ರೂ. ಗೌರವ ಧನ ಕೊಡ್ತಾರೆ. ನನ್ನ ಮಗನಿಗೆ ರಂಗಾಯಣದಲ್ಲಿ 9 ದಿನಕ್ಕೆ ಕೊಟ್ಟಿದ್ದು, ಕೇವಲ 15 ಸಾವಿರ ರೂ. ಆದರೆ ನನ್ನ ಮಗ, ಹೆಂಡತಿ ಬಗ್ಗೆ ಮಾತಾಡೋ ದುಷ್ಟ ಈತ. ನನ್ನ ಪತ್ನಿ ರಂಗಾಯಣದಲ್ಲಿ 40 ವರ್ಷ ಸೇವೆ ಸಲ್ಲಿಸಿದ್ದಾರೆ. ಅವರ ಬಗ್ಗೆ ಮಾತನಾಡುವ ನೀವೇಷ್ಟು ರಂಗಾಯಣದ ಬಗ್ಗೆ ತಿಳಿದಿದ್ದೀರಿ ಎಂದು ಪ್ರಶ್ನಿಸಿದರು.
ಅಡ್ಡಂಡ ಕಾರ್ಯಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ಈಗಾಗಲೇ ಅವರಿಗೆ ನೋಟಿಸ್ ನೀಡಲಾಗಿದೆ. ಈ ಕೂಡಲೇ ಅಡ್ಡಂಡ ಕಾರ್ಯಪ್ಪ ಕ್ಷಮೆ ಕೋರದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ. ಅವರ ಅಕ್ರಮದ ಬಗ್ಗೆ ಎಲ್ಲ ದಾಖಲೆ ನಮ್ಮ ಬಳಿ ಇದೆ ಎಂದು ತಿರುಗೇಟು ನೀಡಿದರು.
ಹಿಂದುಳಿದ ವರ್ಗಗಳ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಮಾತನಾಡಿ, ಅಡ್ಡಂಡ ಕಾರ್ಯಪ್ಪ, ಜನ್ನಿ ಅವರನ್ನು ಕುಡುಕ ಎಂದಿದ್ದಾರೆ. ಆ ಪದವನ್ನು ಈ ಕೂಡಲೇ ಹಿಂಪಡೆಯಬೇಕು. ತೆವಲಿಗಾಗಿ ಮಾತನಾಡಬಾರದು. ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸುವವರಿಗೆ ಹೋರಾಟ ನಡೆಸಲಾಗುವುದು. ಇದೇ 27 ರಂದು ಮೈಸೂರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸುತ್ತಿದ್ದಾರೆ. ಅವರಿಗೆ ಈ ಬಗ್ಗೆ ತಿಳಿಸಿ ಅಡ್ಡಂಡ ಕಾರ್ಯಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮನವಿ ಮಾಡಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ದಿವಂಗತ ರಾಕೇಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದ ವಿರುದ್ಧ ಮಾತನಾಡುವ ರಂಗಾಯಣದ ನಿರ್ದೇಶಕರ ವಿಕೃತ ಮನಸ್ಥಿತಿ ಈಗ ಹೊರಬರುತ್ತಿದೆ. ಆರು ವರ್ಷದ ಬಳಿಕ ಈಗ ಆ ಪ್ರಶ್ನೆ ಮಾಡುತ್ತಿರುವ ಅಡ್ಡಂಡ ಕಾರ್ಯಪ್ಪ ಅವರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. (ಕೆ.ಎಸ್, ಎಂ.ಎನ್)