ಮೈಸೂರು

ಕಾವೇರಿ ಆಸ್ಪತ್ರೆ ವೈದ್ಯರಿಂದ ಹೃದಯದ ಕೃತಕ ಕವಾಟ ಸೋರುವಿಕೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಮೈಸೂರು,ಫೆ.20-ಹೃದಯದ ಕೃತಕ ಕವಾಟದಲ್ಲಿ ಸೋರುವಿಕೆಯಿಂದ ಬಳಲುತ್ತಿದ್ದ ರೋಗಿಗೆ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಇಂದು ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಜೆ.ರಾಜಗೋಪಾಲ್ ಮಾಹಿತಿ ನೀಡಿದರು.

ವಕೀಲರಾದ ಉಮಾದೇವಿ (54 ವರ್ಷ) ಅವರು 2015ರಲ್ಲಿ ಹೈದ್ರಾಬಾದ್‍ನಲ್ಲಿ ಹೃದಯ ಕವಾಟ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಮೂರೂವರೆ ವರ್ಷದ ಬಳಿಕ ಕೃತಕ ಹೃದಯ ಕವಾಟದಲ್ಲಿ ಸೋರಿಕೆ ಉಂಟಾಗಿತ್ತು. ಇದರಿಂದ ರೋಗಿಯ ಆರೋಗ್ಯ ಸ್ಥಿತಿ ದಿನೇದಿನೇ ಹದಗೆಡುತ್ತಿತ್ತು. ಹಲವು ಆಸ್ಪತ್ರೆಗಳಲ್ಲಿ ತೋರಿಸಲಾಗಿ ಇದನ್ನು ಗುಣ ಪಡಿಸಲು ಕಷ್ಟ ಎಂದು ತಿಳಿಸಿದ್ದರು.

ಈ ವೇಳೆ ಮೈಸೂರಿನ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‍ನ ಸಲಹೆಗೆ ಮುಂದಾದರು. ಆಸ್ಪತ್ರೆಯ ಹೃದಯ ತಜ್ಞರಾದ ಡಾ.ಯತೀಶ್, ಶ್ರೀಧರ್, ಡಾ.ವನಿತಾ, ಹಿರಿಯ ಹೃದಯ ಸಂಬಂಧಿ ಅರವಳಿಕೆ ತಜ್ಞ ಡಾ.ಸಾತ್ವಿಕ್ ಮುಖ್ಯ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಎಸ್.ಸಿ.ಮಧುಪ್ರಕಾಶ್ ನೇತೃತ್ವದ ತಂಡ ಎರಡು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಅವರು ಆರೋಗ್ಯವಾಗಿದ್ದಾರೆ ಎಂದರು.

ಇದೊಂದು ಅಪರೂಪದ ಶಸ್ತ್ರ ಚಿಕಿತ್ಸೆ. ಸೋರಿಕೆಗೆ ಮುಚ್ಚಳವನ್ನು ಯಶಸ್ವಿಯಾಗಿ ಹಾಕಲಾಗಿದೆ. ಇದರಿಂದಾಗಿ ಸಂಪೂರ್ಣ ಸೋರಿಕೆಯನ್ನು ತಡೆಗಟ್ಟಲಾಗಿದ್ದು, ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ವೈದ್ಯರ ತಂಡದಿಂದ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

ಊಮಾದೇವಿ ಮಾತನಾಡಿ, ಆಸ್ಪತ್ರೆಯ ವೈದ್ಯರ ತಂಡದ ಸಲಹೆ ಮೇರೆಗೆ ನಡೆಸಿದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಸಂಪೂರ್ಣ ಗುಣಮುಖವಾಗಿರುವುದು ಸಂತಸ ತಂದಿದೆ. ಹಿಂದೆ ಕವಾಟ ಬದಲಾವಣೆ ಮಾಡಿದ್ದಾಗ ಕೆಲವೊಂದು ನಿಯಮಗಳನ್ನು ದೈನಂದಿನ ಚಟುವಟಿಕೆಯಲ್ಲಿ ಅನುಸರಿಸಬೇಕಿತ್ತು. ಆದರೆ, ಇಲ್ಲಿ ಚಿಕಿತ್ಸೆ ಬಳಿಕ ಯಾವುದೇ ಪದ್ಧತಿಯಿಲ್ಲದೆ ಸಂಪೂರ್ಣವಾಗಿ ಗುಣಮುಖವಾಗಿದ್ದೇನೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ಸೌಲಭ್ಯ ನಿರ್ದೇಶಕ ಸಂದೀಪ್ ಪಟೇಲ್ ಉಪಸ್ಥಿತರಿದ್ದರು. (ಕೆ.ಎಸ್, ಎಂ.ಎನ್)

Leave a Reply

comments

Related Articles

error: