ಪ್ರಮುಖ ಸುದ್ದಿ

ಭವಿಷ್ಯದ ಪೀಳಿಗೆಯಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸಿ : ಜಿ.ಚಿದ್ವಿಲಾಸ್ ಕರೆ

ರಾಜ್ಯ( ಮಡಿಕೇರಿ)ಫೆ.22: – ಧಾರ್ಮಿಕ ಪ್ರಜ್ಞೆಯನ್ನು ಮುಂದಿನ ಪೀಳಿಗೆಯಲ್ಲಿ ಬೆಳೆಸುವ ಮೂಲಕ ಸ್ವಸ್ಥ ಸಮಾಜವನ್ನು ರೂಪಿಸಬೇಕಾದ ಹೊಣೆಗಾರಿಕೆ ಪ್ರತೀ ಧರ್ಮದ ಮುಖಂಡರ ಮೇಲಿದೆ ಎಂದು ಶಕ್ತಿ ಪತ್ರಿಕೆಯ ಸಂಪಾದಕ ಜಿ.ಚಿದ್ವಿಲಾಸ್ ಹೇಳಿದರು.

ಮಡಿಕೇರಿಯ ಜಾಗತಿಕ ಅಹ್ಮದಿಯಾ ಮುಸ್ಲಿಮ್ ಜಮಾ ಅತ್ತಿನ ವತಿಯಿಂದ ಬದರ್ ಎಂಬ ಕನ್ನಡ ವಾರಪತ್ರಿಕೆಯನ್ನು ಬಿಡುಗೊಳಿಸಿದ ಬಳಿಕ ಮಾತನಾಡಿದ ಚಿದ್ವಿಲಾಸ್ , ಮುಂದಿನ ಜನಾಂಗಕ್ಕೆ ನಾವು ಎಂಥ ಸಮಾಜವನ್ನು ಬಿಟ್ಟುಕೊಡುತ್ತಿದ್ದೇವೆ ಎಂದು ಚಿಂತಿಸುವ ಕಾಲಘಟ್ಟದಲ್ಲಿದ್ದೇವೆ. ದ್ವೇಶ, ಅಸೂಯೆ, ಮತ್ಸರ, ಕೋಮುಭಾವನೆಯ ಸಂದೇಶವನ್ನು ಖಂಡಿತಾ ಯಾರೋಬ್ಬರೂ ಭವಿಷ್ಯದ ಪೀಳಿಗೆಗೆ ನೀಡುವಂತಾಗಬಾರದು. ಉತ್ತಮ ಸಂದೇಶ ಹೊಂದಿರುವ ಪ್ರಚೋದನೆಗಳು ಸಮಾಜದಲ್ಲಿ ವ್ಯಾಪಿಸಬೇಕೇ ವಿನಾ ಸಮಾಜದ ಶಾಂತಸ್ಥಿತಿಗೆ ಧಕ್ಕೆ ತರುವಂಥ ಪ್ರಚೋದನೆಗೆ ಯಾರೂ ಉತ್ತೇಜನ ನೀಡಬಾರದು ಎಂದು ಮನವಿ ಮಾಡಿದರು.

ಯಾರಲ್ಲಿ ಪ್ರೀತಿ, ತಾಳ್ಮೆ, ಸೌಹಾರ್ದತೆ, ಸಹಬಾಳ್ವೆಯ ಚಿಂತನೆಯಿರುತ್ತದೆ ಅಂಥವರ ಜೀವನ ಕೂಡ ಸುಂದರವಾಗಿರುತ್ತದೆ ಎಂದು ಹೇಳಿದ ಚಿದ್ವಿಲಾಸ್, ಬದಲಾವಣೆಯಾಗುತ್ತಲೇ ಇರುವ ಆಧುನಿಕ ಸಮಾಜದಲ್ಲಿ ಸೌಹಾಧ9ತೆಯ ಕಾರ್ಯಕ್ರಮಗಳು ಧಾರ್ಮಿಕ ಕೇಂದ್ರಗಳಿಂದ ಹೆಚ್ಚಾಗಬೇಕೆಂದು ಸಲಹೆ ನೀಡಿದರು.
ಮಕ್ಕಳಲ್ಲಿ ಓದುವ ಪ್ರವೃತ್ತಿಯನ್ನು ಹೆಚ್ಚಿಸುವಂತಾಗಬೇಕೆಂದು ಅಭಿಪ್ರಾಯಪಟ್ಟ ಚಿದ್ವಿಲಾಸ್, ಇದರಿಂದ ಮಕ್ಕಳಿಗೆ ಯಾವುದೇ ವಿಚಾರಗಳ ಬಗೆಗೂ ಏಕಾಗ್ರತೆಗೆ ಸಹಕಾರಿಯಾಗುತ್ತದೆ. ಜ್ಞಾನದ ಅರಿವುಂಟಾಗುತ್ತದೆ ಎಂದೂ ಚಿದ್ವಿಲಾಸ್ ಹೇಳಿದರು.

ಟಿವಿ 1 ನ ವ್ಯವಸ್ಥಾಪಕ ನಿದೇ9ಶಕ ಅನಿಲ್ ಎಚ್.ಟಿ. ಮಾತನಾಡಿ, ಮೊಬೈಲ್ ಎಂಬ ಮಾಧ್ಯಮ ಇಂದಿನ ನವಪೀಳಿಗೆಯಿಂದ ದುರುಪಯೋಗವಾಗುತ್ತಿರುವುದೇ ಹೆಚ್ಚಾಗಿದೆ. ಕರೆ ಹಾಗೂ ಸಂದೇಶಗಳಿಗೆ ಉಪಯೋಗವಾಗಬೇಕಾಗಿದ್ದ ಮೊಬೈಲ್ ವದಂತಿ, ಸುಳ್ಳು ಮತ್ತು ಕೆಟ್ಟ ಪ್ರಚೋದನೆಗಳ ಸುದ್ದಿಗಳನ್ನು ವ್ಯಾಪಿಸುವ ಮೂಲಕ ಸಮಾಜಕ್ಕೆ ಉಪದ್ರಕಾರಿ ಮಾಧ್ಯಮದಂತಾಗಿದೆ ಎಂದು ವಿಷಾಧಿಸಿದರು. ಪತ್ರಿಕಾ ಓದುಗರ ಸಂಖ್ಯೆ ಕ್ಷೀಣಿಸುತ್ತಿರುವ ದಿನಮಾನಗಳಲ್ಲಿ ಓದುವ ಪ್ರವೃತ್ತಿ ಹೆಚ್ಚಾಗಬೇಕು. ಧಾರ್ಮಿಕ ಪತ್ರಿಕೆಗಳು ಆಯಾ ಧರ್ಮದ ನಿಜಸಾರವನ್ನು ಪ್ರಕಟಿಸುವ ಮೂಲಕ ಎಲ್ಲಾ ಧರ್ಮೀಯರಲ್ಲಿಯೂ ತಮ್ಮ ಧರ್ಮದ ವಿಚಾರಗಳ ಬಗ್ಗೆ ಮನವರಿಕೆ ಮಾಡಿಕೊಡುವಂತಾಗಬೇಕೆಂದು ಆಶಿಸಿದರು.

ಬೆಳದಿಂಗಳು ಎಂಬ ಕನ್ನಡ ಪದದ ಉರ್ದುರೂಪವಾದ ಬದರ್ ಎಂಬ ಹೆಸರಿನ ಪತ್ರಿಕೆಯನ್ನು ಕನ್ನಡದಲ್ಲಿ ಪ್ರಕಟಿಸುವ ಮೂಲಕ ಧಾರ್ಮಿಕ ಸಂದೇಶವನ್ನು ಸುಲಭವಾಗಿ ಹೆಚ್ಚಿನವರಿಗೆ ತಲುಪಿಸುವಲ್ಲಿ ಶ್ಲಾಘನೀಯ ಹೆಜ್ಜೆಯಿಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮಡಿಕೇರಿಯ ಅಹ್ಮದಿಯಾ ಮುಸ್ಲಿಮ್ ಜಮಾ ಅತ್ ನ ಅಧ್ಯಕ್ಷ ಎಂ.ಬಿ.ಝಹೀರ್ ಅಹ್ಮದ್ ಮಾತನಾಡಿ, 1902 ರಲ್ಲಿ ಉರ್ದುವಿನಲ್ಲಿ ಪ್ರಕಟಣೆ ಪ್ರಾರಂಭಿಸಿದ ಬದರ್ ಪಂಜಾಬ್ ನಲ್ಲಿ ಕೇಂದ್ರ ಸ್ಥಾನ ಹೊಂದಿದ್ದು ಭಾರತದ 7 ಭಾಷೆಗಳಲ್ಲಿ ಪ್ರಕಟಣೆ ಕಾಣುತ್ತಿದೆ. ಇದೀಗ ಮಡಿಕೇರಿಯಿಂದ ಕನ್ನಡ ಭಾಷೆಯಲ್ಲಿಯೂ ಪ್ರಕಟಣೆ ಪ್ರಾರಂಭಿಸಿದೆ ಎಂದು ಮಾಹಿತಿ ನೀಡಿದರು. ಆದ್ಮಾತ್ಮಿಕ ರಂಗದಲ್ಲಿ ಪ್ರಗತಿ ಕಾಣಬೇಕಾದಲ್ಲಿ ಧಾರ್ಮಿಕ ತಿಳುವಳಿಕೆಯನ್ನು ಹೆಚ್ಚಾಗಿ ಹೊಂದಿರಬೇಕು. ಈ ನಿಟ್ಟಿನಲ್ಲಿ ಬದರ್ ಕಾರ್ಯಪ್ರವೃತ್ತವಾಗಲಿದೆ ಎಂದೂ ಝಹೀರ್ ಅಹ್ಮದ್ ಹೇಳಿದರು.
ಬದರ್ ಪತ್ರಿಕೆಯ ಕನ್ನಡ ಅವತರಣಿಕೆಯ ಸಂಪಾದಕ ತಾರಿಖ್ ಅಹ್ಮದ್ ಇದ್ರಿಸ್ ಧಾರ್ಮಿಕ ಪತ್ರಿಕೆಯ ಕುರಿತಾಗಿ ಮಾಹಿತಿ ನೀಡಿದ ಕಾರ್ಯಕ್ರಮದಲ್ಲಿ ಅಹ್ಮದಿಯ ಮುಸ್ಲಿಮ್ ಜಮಾ ಅತ್ ಇಮಾಮ್ ಹಾಫಿಝ್ ರಫೀಕ್ ಉಝ್ಝಮ ಉಪಸ್ಥಿತರಿದ್ದರು. ಜಿ.ಎಂ.ಶರೀಫ್ ನಿರೂಪಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: