ಮೈಸೂರು

ದೀಕ್ಷೆ ತೊಟ್ಟು ವ್ರತ ಆರಂಭಿಸಿರುವ ಶ್ರೀರಾಮುಲು

ಮಾಜಿ ಸಚಿವ, ಹಾಲಿ ಬಳ್ಳಾರಿ ಸಂಸದ ಶ್ರೀರಾಮುಲು ದೀಕ್ಷೆ ತೊಟ್ಟಿದ್ದಾರೆ. ಮಾತ್ರವಲ್ಲ ವ್ರತವನ್ನು ಆರಂಭಿಸಿದ್ದಾರೆ. ಈ ಮಾಹಿತಿಯನ್ನು ಸಿಟಿಟುಡೆಗೆ ರಾಮುಲು ಆಪ್ತ ಮೂಲಗಳು ತಿಳಿಸಿವೆ. ಕಳೆದ ಆರು ತಿಂಗಳಿನಿಂದ ಸಂಸದರು ಈ ವ್ರತವನ್ನು ಆಚರಿಸುತ್ತಿದ್ದು, ನಿತ್ಯವೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅಲ್ಲದೆ, ವ್ರತಕ್ಕೆ ಭಂಗ ಬಾರದಂತೆ ತಲ್ಲೀನರಾಗಿದ್ದಾರೆ.

ಮೈಸೂರಿಗೆ ಆಗಮಿಸಿದರೂ ವ್ರತ ಬಿಡದ ಸಂಸದರು

ದೀಕ್ಷೆ ತೊಟ್ಟ ಸಂಸದರು, ನಿತ್ಯವೂ ಎರಡು ಗಂಟೆಗಳ ಕಾಲ ಪೂಜೆಯಲ್ಲಿ ಮಗ್ನರಾಗಿರುತ್ತಾರೆ. ಭಾನುವಾರ ಮೈಸೂರಿಗೆ ಆಗಮಿಸಿದ್ದ ಶ್ರೀರಾಮುಲು ಬೆಳಗಿನ ಜಾವ 4ಗಂಟೆಯಲ್ಲಿ ಯಾರಿಗೂ ಹೇಳದೆಯೇ ಪೂಜೆಯಲ್ಲಿ ಮಗ್ನರಾಗಿ ಆರು ಗಂಟೆ ವೇಳೆಗೆ ಪೂಜೆ ಮುಗಿಸಿದ್ದಾರೆ. ಪೂಜೆಯಲ್ಲಿ ಮಗ್ನರಾದ ಭಾವಚಿತ್ರ ಕೂಡ ಸಿಟಿಟುಡೆಗೆ ಲಭಿಸಿದೆ.

ಕಟ್ಟು ನಿಟ್ಟಿನಿಂದ ವ್ರತ ಆಚರಿಸುತ್ತಿರುವ ಸಂಸದರು ಆರು ತಿಂಗಳಿನಿಂದ ಮಾಂಸಹಾರ ಸೇವನೆ ಕೂಡ ತ್ಯಜಿಸಿದ್ದಾರೆ. ವ್ರತದ ಆಚರಣೆಯಿಂದ ಸಂಪೂರ್ಣ ಶಾಖಾಹಾರಿಯಾಗಿರುವ ಸಂಸದರು, ವ್ರತಕ್ಕೆ ಭಂಗವಾಗದಂತೆ ಗಮನವಿಟ್ಟಿದ್ದಾರೆ.

ಕಾಶಿಯಲ್ಲಿ ಲಿಂಗ ಪೂಜೆ ಮಾಡುತ್ತಿರುವುದನ್ನು ಕಂಡ ರಾಮುಲು, ಕಾಶಿ ಜಗದ್ಗುರುಗಳ ಬಳಿ ಪೂಜೆ ಕುರಿತು ವಿಚಾರಿಸಿದ್ದಾರೆ. ಈ ವೇಳೆ ದೀಕ್ಷೆ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ತದನಂತರ ಕಾಶಿಯಲ್ಲೇ‌ ದೀಕ್ಷೆ ತೊಟ್ಟ ಸಂಸದರು, ಅಲ್ಲಿಂದ ವ್ರತ ಆರಂಭಿಸಿದ್ದಾರೆ. ಕಟ್ಟುನಿಟ್ಟಿನ ವ್ರತ ಆರಂಭಿಸಿರುವ ಇವರು, ಭಾನುವಾರ ಮೈಸೂರಿಗೆ ಆಗಮಿಸಿದ ವೇಳೆ‌ ಯಾರಿಗೂ ತಿಳಿಯದೆ, ಮುನೇಶ್ವರ ನಗರದ ಮಾತೆ ಬಸವಾಂಜಲಿ ಮಠದಲ್ಲಿ ಬೆಳಗಿನ ಜಾವ ಎರಡು ಗಂಟೆಗಳ ಕಾಲ ಲಿಂಗ ಪೂಜೆ ಮಾಡಿ, ನಂತರ ನಂಜನಗೂಡಿನಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕ್ರಮದಲ್ಲಿ‌ ಪಾಲ್ಗೊಂಡಿದ್ದರು.

ಮಾಂಸಹಾರ ತ್ಯಜಿಸಿ ಲಿಂಗ ಪೂಜೆಯಲ್ಲಿ ತೊಡಗಿಸಿಕೊಂಡಿರುವ ಶ್ರೀರಾಮುಲು ಅವರ ವ್ರತದ ಹಿಂದಿನ ಮರ್ಮ ಮಾತ್ರ ರಹಸ್ಯವಾಗಿಯೇ ಇದೆ.  (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: