ಮನರಂಜನೆ

ಹೆಣ್ಣು ಮಗುವಿನ ತಾಯಿಯಾದ ನಟಿ ಶಿಲ್ಪಾ ಶೆಟ್ಟಿ

ಮುಂಬೈ,ಫೆ.22-ನಟಿ ಶಿಲ್ಪಾ ಶೆಟ್ಟಿ ಕುಂದ್ರ ಮತ್ತೆ ತಾಯಿಯಾದ ಸಂತಸ, ಸಂಭ್ರಮದಲ್ಲಿದ್ದಾರೆ. ಶಿಲ್ಪಾ ಶೆಟ್ಟಿ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ.

ಮನೆಗೆ ಹೊಸ ಸದಸ್ಯೆ ಆಗಮನವಾಗಿರುವ ಸಂತಸದ ವಿಷಯವನ್ನು ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್ ಕುಂದ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಫೆ.15 ರಂದು ಶಿಲ್ಪಾ ಶೆಟ್ಟಿ ಮತ್ತೆ ತಾಯಿಯಾಗಿದ್ದು, ಈ ವಿಚಾರವನ್ನು ನಿನ್ನೆ ಬಹಿರಂಗಪಡಿಸಿದ್ದಾರೆ. ಹೆಣ್ಣು ಮಗುವನ್ನು ಶಿಲ್ಪಾ ದಂಪತಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ದಂಪತಿ ಮುದ್ದಾದ ಮಗುವಿಗೆ ಸಮಿತಾ ಶೆಟ್ಟಿ ಕುಂದ್ರ ಎಂದು ಹೆಸರಿಟ್ಟಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಶಿಲ್ಪಾ ಶೆಟ್ಟಿ, `ನಮ್ಮ ಪ್ರಾರ್ಥನೆಗೆ ಪವಾಡದಿಂದ ಉತ್ತರಿಸಲಾಗಿದೆ. ನಮ್ಮ ಪುಟ್ಟ ಏಂಜಲ್ ಆಗಮನವನ್ನು ಘೋಷಿಸಲು ನಾವು ರೋಮಂಚನಗೊಂಡಿದ್ದೇವೆ. ಸಮಿತಾ ಶೆಟ್ಟಿ ಕುಂದ್ರ. ಫೆ. 15 ರಂದು ಜನಿಸಿದರು. ಜೂನಿಯರ್ ಶಿಲ್ಪಾ ಶೆಟ್ಟಿ ಕುಂದ್ರ’ ಎಂದು ಬರೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ 2009 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2012ರಲ್ಲಿ ಶಿಲ್ಪಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈ ದಂಪತಿಗೆ ಈಗಾಗಲೇ ವಿಹಾನ್ ಎಂಬ ಗಂಡು ಮಗುವಿದೆ. ಇದೀಗ ಈ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ.

ಮದುವೆ ನಂತರ ಶಿಲ್ಪಾ ಶೆಟ್ಟಿ ಬಣ್ಣದ ಲೋಕದಿಂದ ಬ್ರೇಕ್ ಪಡೆದಿದ್ದರು. ಅನೇಕ ವರ್ಷಗಳ ಬಳಿಕ ‘ನಿಕಮ್ಮ’ ಸಿನಿಮಾ ಮೂಲಕ ಮತ್ತೆ ವಾಪಾಸ್ ಆಗಿದ್ದಾರೆ. ಇನ್ನು ‘ಹಂಗಾಮ-2‘ ಸಿನಿಮಾದಲ್ಲೂ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಕನ್ನಡ ನಟಿ ಪ್ರಣೀತಾ ಕೂಡ ಅಭಿನಯಿಸುತ್ತಿದ್ದಾರೆ. (ಎಂ.ಎನ್)

 

Leave a Reply

comments

Related Articles

error: