ಮೈಸೂರು

ಕ್ರೀಡೆ ಓದಿಗೆ ಪೂರಕವಾಗಲಿದೆ : ಪ್ರೊ.ದಯಾನಂದ ಮಾನೆ

ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಹಾಗೂ ಸ್ನಾತಕೋತ್ತರ ಕ್ರೀಡಾ ಮಂಡಳಿ ಮಾನಸ ಗಂಗೋತ್ರಿ ಮೈಸೂರು, ಇವರ ಸಹಯೋಗದೊಂದಿಗೆ ಮೈಸೂರು ವಿವಿ ಅಂತರ ಕಾಲೇಜು ಅಂತರ ವಲಯ ಪುರುಷರ ಕ್ರೀಡಾ‌ಕೂಟಕ್ಕೆ ಮೈಸೂರು ವಿವಿಯ ಪ್ರಭಾರ ಕುಲಪತಿ ಪ್ರೊ.ದಯಾನಂದ ಮಾನೆ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.

ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಇದೇವೇಳೆ ಪ್ರೊ.ದಯಾನಂದ ಮಾನೆ ಮಾತನಾಡಿ, ನಿಮ್ಮಲ್ಲಿರುವ ಆಂತರಿಕ ಕ್ರೀಡಾ ಶಕ್ತಿಯನ್ನು ಪ್ರದರ್ಶಿಸಿ. ಕ್ರೀಡೆಯಲ್ಲಿ ಆಸಕ್ತಿ ಬೆಳಸಿಕೊಳ್ಳಿ. ಕ್ರೀಡೆ ಮಾನವನ ಜೀವನದ ಅವಿಭಾಜ್ಯ ಅಂಗ. ಕ್ರೀಡೆ ವಿದ್ಯಾರ್ಥಿಗಳ ಓದಿಗೆ ಪೂರಕವಾಗಲಿದೆ. ಬೌದ್ಧಿಕ ಶಕ್ತಿಯನ್ನು ಹೆಚ್ಚಿಸಲಿದೆ.  ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಬೆಳವಣಿಗೆಯ ಜೊತೆ, ಮಾನಸಿಕ ಬೆಳವಣಿಗೆಯೂ ಆಗಲಿದೆ. ಹೆಚ್ಚು ಪ್ರಬುದ್ಧರಾಗುತ್ತೀರಿ. ಆರೋಗ್ಯದ ದೃಷ್ಟಿಯಿಂದಲೂ ಕ್ರೀಡೆ ಒಳ್ಳೆಯದು. ನಿಮ್ಮ ಸಾಮರ್ಥ್ಯ ಏನಿದೆಯೋ ಅದಕ್ಕಿಂತಲೂ ಹೆಚ್ಚಿನ  ಸಾಧನೆ ಮಾಡಿ ಎಂದರು.

ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಎಂ.ಎಸ್.ಎಸ್. ಕುಮಾರ್ ಮಾತನಾಡಿ,  ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು. ಎಲ್ಲಾ ರೀತಿಯ ಸಮಸ್ಯೆಗಳಿಗೆ  ಎದುರಿಸಲು ಕ್ರೀಡೆ ಸ್ಫೂರ್ತಿ ನೀಡಲಿದೆ. ಈಗಾಗಲೇ ವಲಯ ಮಟ್ಟ ಗೆದ್ದು, ಅಂತರ ಕಾಲೇಜು ಮಟ್ಟಕ್ಕೆ ಬಂದಿದ್ದೀರಿ. ಕ್ರೀಡೆಯಲ್ಲಿ ಉತ್ಸಾಹದಿಂದ ತೊಡಗಿಸಿಕೊಳ್ಳಿ. ಕ್ರೀಡಾಂಗಣದಲ್ಲಿ ಮಾತ್ರ ಎದುರಾಳಿಗಳಾಗಿರಿ. ಮೈದಾನದ ಹೊರಗೆ ಅಣ್ಣ ತಮ್ಮಂದಿರಂತೆ ವರ್ತಿಸಿ. ತಪ್ಪಾಗದಂತೆ ಆಡುವ ಮೂಲಕ ಯಶಸ್ಸು ಸಾಧಿಸಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಕ್ರೀಡಾ ಮಂಡಳಿ ಅಧ್ಯಕ್ಷ ಎಸ್.ರವಿ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: