ಕ್ರೀಡೆ

ಕೇವಲ ಒಂದು ಸೋಲಿನಿಂದ ರಾತ್ರೋರಾತ್ರಿ ಕೆಟ್ಟ ತಂಡವಾಗುವುದಿಲ್ಲ: ವಿರಾಟ್ ಕೊಹ್ಲಿ

ವೆಲ್ಲಿಂಗ್ಟನ್,ಫೆ.20- ಕೇವಲ ಒಂದು ಸೋಲಿನಿಂದಾಗಿ ರಾತ್ರೋರಾತ್ರಿ ಕೆಟ್ಟ ತಂಡವಾಗುವುದಿಲ್ಲ ಎಂದು ತಂಡದ ಬೆನ್ನಿಗೆ ನಿಂತಿದ್ದಾರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲಿಗೆ ಗುರಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೊಹ್ಲಿ, ನಾವು ಚೆನ್ನಾಗಿ ಆಡಿಲ್ಲವೆಂಬ ಸ್ಪಷ್ಟವಾದ ಮನವರಿಕೆಯಿದೆ. ಸ್ಪರ್ಧಾತ್ಮಕತೆ ಕ್ರಿಕೆಟ್ ಆಡಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಸೋಲನ್ನು ಒಪ್ಪಿಕೊಳ್ಳುವುದರಿಂದ ಯಾವುದೇ ನಾಚಿಕೆಯಿಲ್ಲ. ಇದನ್ನು ಒಪ್ಪಿಕೊಂಡಲ್ಲಿ ಮಾತ್ರ ಮುಂದಿನ ಪಂದ್ಯದಲ್ಲಿ ಮತ್ತಷ್ಟು ಉತ್ತಮ ಮನೋಸ್ಥಿತಿಯಿಂದ ಸ್ಪರ್ಧಿಸಲು ಸಾಧ್ಯ ಎಂದರು.

ನೀವು ಹೇಳಿದಂತೆ ಹಿಂದೆ ನಾವು ಉತ್ತಮ ಕ್ರಿಕೆಟ್ ಆಡಿದ್ದೆವು. ಸೋತ ಪಂದ್ಯಗಳಲ್ಲೂ ಪೈಪೋಟಿ ನೀಡಿದ್ದೆವು. ಆದರೆ ನನಗನಿಸುತ್ತದೆ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಬ್ಯಾಟಿಂಗ್ ಹಿನ್ನೆಡೆಗೆ ಕಾರಣವಾಯಿತು. ಸ್ಪರ್ಧಾತ್ಮಕತೆಯು ಈ ಟೆಸ್ಟ್ ಪಂದ್ಯದ ಮುಖ್ಯ ಘಟಕವಾಗಿದೆ. ಈ ಸೋಲಿನಿಂದ ಪಾಠ ಕಲಿತು ಮತ್ತಷ್ಟು ಸ್ಪರ್ಧಾತ್ಮಕ ಕ್ರಿಕೆಟ್ ಆಡಬೇಕಿದೆ. ನಾವು ಆಡುತ್ತಿರುವ ರೀತಿಯ ಬಗ್ಗೆ ಹೆಮ್ಮೆಪಟ್ಟುಕೊಳ್ಳಬೇಕು. ಆದರೆ ಈ ಪಂದ್ಯವು ಉತ್ತಮ ಉದಾಹರಣೆಯಾಗಿರಲಿಲ್ಲ ಎಂದರು.

ಮೊದಲ ಇನ್ನಿಂಗ್ಸ್‌ನಲ್ಲಿ ಕೆಟ್ಟ ಬ್ಯಾಟಿಂಗ್ ಪ್ರದರ್ಶನವು ಹಿನ್ನೆಡೆಗೆ ಕಾರಣವಾಯಿತು. ಮೊದಲ ದಿನದ ಬಳಿಕ ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿ ಸಾಗಿತ್ತು. ಹಾಗೊಂದು ವೇಳೆ ಮೊದಲ ಇನ್ನಿಂಗ್ಸ್‌ನಲ್ಲಿ 230 ಅಥವಾ 240 ರನ್ ಗಳಿಸಿದ್ದರೆ ಬೌಲರ್‌ಗಳಿಗೆ ಅವಕಾಶ ಸಿಗುತ್ತಿತ್ತು. ಇದರಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ಎದುರಾಳಿಗಳು ಗಳಿಸಿದ ಮುನ್ನಡೆಯು ಕಡಿಮೆಯಾಗುತ್ತಿತ್ತು. ಈ ಎಲ್ಲ ಅಂಶಗಳನ್ನು ಮನಗಾಣಬೇಕಿದೆ ಎಂದು ಹೇಳಿದರು.

ಹಿಂದಿನಿಂದಲೂ ನ್ಯೂಜಿಲೆಂಡ್ ಬೌಲಿಂಗ್ ವಿಭಾಗವು ವೈವಿಧ್ಯತೆಯನ್ನು ಹೊಂದಿದೆ. ದಕ್ಷಿಣ ಆಫ್ರಿಕಾದಲ್ಲಿ ಆಡುವಾಗ ಮೊರ್ನೆ ಮಾರ್ಕೆಲ್, ವೆರ್ನಾಲ್ ಪಿಲಾಂಡರ್, ಡೇಲ್ ಸ್ಟೇನ್ ವಿರುದ್ಧ ಆಡಿದ್ದೇವೆ. ಅಂತಹ ಕಠಿಣ ದಾಳಿಯನ್ನು ಎದುರಿಸಿದ್ದೇವೆ. ಆದರೆ ವೆಲ್ಲಿಂಗ್ಟನ್ ಪಿಚ್ ವಿಚಿತ್ರವಾಗಿ ವರ್ತಿಸುತ್ತಿತ್ತು. ನಾನು ಈ ವಿಚಾರವನ್ನು ಕೇನ್ ವಿಲಿಯಮ್ಸನ್ ಜೊತೆಗೂ ಹಂಚಿಕೊಂಡಿದ್ದೆ. ಅಷ್ಟೊಂದು ಸೀಮಿಂಗ್ ಆಗುತ್ತಿರಲಿಲ್ಲ. ಹೌದು, ಸ್ವಿಂಗ್ ದಾಳಿಯು ತೊಂದರೆ ಕೊಡುತ್ತಿದ್ದವು. ಆದರೆ ಪಿಚ್ ನಿಧಾನವಾಗಿ ವರ್ತಿಸುತ್ತಿದ್ದವು. ಹಾಗಾಗಿ ನಾವು ಅಂದುಕೊಂಡತೆ ಆಡಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.

ಎದುರಾಳಿಗಳು ಯೋಜನೆಯಂತೆ ಸಮರ್ಪಕವಾಗಿ ನಿಭಾಯಿಸಿದರು. ಅವರು ವೇಗಿಗಳು ನಿಖರ ದಾಳಿ ಸಂಘಟಿಸಿದರು. ಅದಕ್ಕೆ ತಕ್ಕುದಾಗಿ ಫೀಲ್ಡಿಂಗ್ ರಚನೆ ಮಾಡಿದರು. ಪಿಚ್ ವರ್ತನೆಯು ಅವರಿಗೆ ನೇರವಾಯಿತು. ಇದರಿಂದ ರನ್ ಗಳಿಸಲು ಸಾಧ್ಯವಾಗಲಿಲ್ಲ. ಎದುರಾಳಿಗಳು ನಮಗಿಂತಲೂ ಉತ್ತಮ ಕ್ರಿಕೆಟ್ ಆಡಿದ್ದಾರೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು. ನಮ್ಮ ಮೇಲೆ ನಿರಂತರ ಒತ್ತಡವನ್ನು ಹೇರುತ್ತಲೇ ಸಾಗಿದರು. ಈಗ ತಪ್ಪಿನಿಂದ ಪಾಠ ಕಲಿತು ಉತ್ತಮ ಪ್ರದರ್ಶನ ನೀಡುವುದು ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿಯಾಗಿದೆ ಎಂದರು.

ಕ್ರಿಸ್ಟ್‌ಚ‌ರ್ಚ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ತಿರುಗಿ ಬೀಳುವುದರ ಬಗ್ಗೆ ಮಾತನಾಡಿದ ವಿರಾಟ್ ಕೊಹ್ಲಿ, ಮೊದಲನೇಯದಾಗಿ ಹೊರಗಿನವರ ಹೇಳಿಕೆಗಳತ್ತ ಗಮನ ಕೊಡಬಾರದು. ಹಾಗಾದ್ದಲ್ಲಿ ಸ್ಪಷ್ಟ ಮನೋಸ್ಥಿತಿಯಿಂದ ಕಣಕ್ಕಿಳಿಯಲು ಸಾಧ್ಯವಿಲ್ಲ. ಸೋಲು-ಗೆಲುವು ಸಹಜ. ಆದರೆ ನಮ್ಮ ತಂಡವು ಹೊರಗಿನ ವಿಚಾರಗಳ ಬಗ್ಗೆ ಗಮನ ಕೊಡುವುದಿಲ್ಲ. ಅಂತಾರಾಷ್ಟ್ರೀಯ ದರ್ಜೆಯಲ್ಲಿ ಕ್ರಿಕೆಟ್ ಆಡುವಾಗ ಸೋಲು-ಗೆಲುವು ಸಹಜವಾದ ಪ್ರಕ್ರಿಯೆ. ಇಲ್ಲಿಂದ ಪಾಠ ಕಲಿತುಕೊಂಡು ಹೇಗೆ ಮುಂದಿನ ಪಂದ್ಯದಲ್ಲಿ ಆಡಲಿದ್ದೇವೆ ಎಂಬುದು ಮುಖ್ಯವೆನಿಸಲಿದೆ. ನಾನು ಈಗಾಗಲೇ ಹೇಳಿದಂತೆ ನಾವು ಆಡುತ್ತಿರುವ ರೀತಿಯ ಬಗ್ಗೆ ಹೆಮ್ಮೆಯಿದೆ. ಮುಂದಿನ ಪಂದ್ಯದಲ್ಲೂ ಗೆಲುವಿಗಾಗಿ ಪ್ರಯತ್ನಿಸಲಿದ್ದೇವೆ ಎಂಬುದರಲ್ಲಿ ಸಂಶಯವೇ ಬೇಡ. ಇದಕ್ಕಾಗಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಏನು ಮಾಡಬೇಕೋ ಅವೆಲ್ಲವನ್ನು ಮಾಡಲಿದ್ದೇವೆ. ಮಗದೊಂದು ಸೋಲಿನ ಬಗ್ಗೆ ಭಯವಿಲ್ಲ. ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದರು. (ಎಂ.ಎನ್)

 

Leave a Reply

comments

Related Articles

error: