ಮೈಸೂರು

ಕಾ.ರಾಮೇಶ್ವರಪ್ಪ ನವರ ಅಧಿಕಾರ ದುರುಪಯೋಗ ವಿರೋಧಿಸಿ ಪ್ರತಿಭಟನೆ

ಮೈಸೂರಿನ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ದರ್ಪದಿಂದ ತಮ್ಮ ಕೆಳಗಿನ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಾಮೂಹಿಕ ರಜೆ ನಡೆಸಿ ಅವರ ಕಚೇರಿಯ ಮುಂದೆ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.

ಸೋಮವಾರ ಕಚೇರಿಗೆ ಆಗಮಿಸಿದ ಅಧಿಕಾರಿಗಳು ಸಾಮೂಹಿಕ ರಜೆ ಸಲ್ಲಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತ ಅಧಿಕಾರಿಗಳು ಮಾತನಾಡಿ ನಮಗೆ ಯಾವುದೇ ಕೆಲಸವನ್ನು ಮಾಡಲು ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಬಿಡುತ್ತಿಲ್ಲ. ಕಡತಗಳನ್ನು ಹಾಳು ಮಾಡಿದ್ದಾರೆ ಎಂದು ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಹೊರಿಸಿ ಠಾಣೆಗಳಲ್ಲಿ ದೂರು ನೀಡುತ್ತಿದ್ದಾರೆ. ನಮಗೆ ಯಾವುದೇ ಕಡತಗಳನ್ನು ಪರಿಶೀಲಿಸಲು ಬಿಡುತ್ತಿಲ್ಲ. ಅವರಿಗೆ ಬೆಂಬಲ ನೀಡುವವರನ್ನು ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅವರಿಂದ ತಮಗಾಗುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಈ ಕುರಿತು ಸಂಪೂರ್ಣ ಮಾಹಿತಿ ಪಡೆದು ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ ಬಳಿಕ ಕಚೇರಿಗೆ ತೆರಳಿ ತಮ್ಮ ಕಾರ್ಯ ಆರಂಭಿಸಿದ್ದಾರೆ ಎನ್ನಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: