ಮೈಸೂರು

ಮಾರ್ಚ್‌ ಅಂತ್ಯದ ವೇಳೆಗೆ ರಸ್ತೆಗಿಳಿಯಲಿದೆ ಡಬಲ್‌ ಡೆಕ್ಕರ್‌ ಬಸ್‌ : ಮೈಸೂರು ಪ್ರವಾಸಿ ತಾಣಗಳನ್ನು ಡಬಲ್‌ ಡೆಕ್ಕರ್‌ ಬಸ್‌ ನಲ್ಲಿ ಕುಳಿತು ವೀಕ್ಷಿಸುವ ಅವಕಾಶ

ಮೈಸೂರು,ಫೆ.25:- ಮೈಸೂರು ಪ್ರವಾಸಿಗರಿಗೆ ಖುಷಿಯ ವಿಚಾರವೊಂದು ಲಭಿಸಿದೆ.  ಅದೇನೆಂದರೆ ಮೈಸೂರು ಪ್ರವಾಸಿ ತಾಣಗಳನ್ನು ಇನ್ನು ಮುಂದೆ ಡಬಲ್‌ ಡೆಕ್ಕರ್‌ ಬಸ್‌ ನಲ್ಲಿ ಕುಳಿತು ವೀಕ್ಷಣೆ ಮಾಡಬಹುದು. ಮಾರ್ಚ್‌ ಅಂತ್ಯದ ವೇಳೆಗೆ ಡಬಲ್‌ ಡೆಕ್ಕರ್‌ ಬಸ್‌ ಮೈಸೂರಿನಲ್ಲಿ ರಸ್ತೆಗಿಳಿಯಲಿದೆ.

ಕರ್ನಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮೈಸೂರು ಹಾಗೂ ಹಂಪಿಯಲ್ಲಿ ಪ್ರವಾಸಿ ತಾಣ ವೀಕ್ಷಣೆಗೆ ಬರುವವರಿಗೆ ಅನುಕೂಲ ಕಲ್ಪಿಸಲು ಡಬಲ್‌ ಡೆಕ್ಕರ್‌ ಬಸ್‌ ಗಳನ್ನು ಪರಿಚಯಿಸಲು ಯೋಜನೆ ರೂಪಿಸಿತ್ತು. 2019ರ ಜುಲೈ ತಿಂಗಳಲ್ಲಿ ಅಂದಿನ ಸಿಎಂ ಕುಮಾರಸ್ವಾಮಿ ಇದಕ್ಕೆ 5 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಇದೀಗ ಒಂದು ಬಸ್‌ ಸಿದ್ಧವಾಗಿದೆ. ಉಳಿದ ಐದು ಬಸ್‌ ಗಳು ಮಾರ್ಚ್‌ ಅಂತ್ಯಕ್ಕೆ ರೆಡಿಯಾಗಲಿವೆ.

ಬೆಂಗಳೂರು ಮೂಲದ ಕೆಎಂಎಸ್‌ ಕೋಚ್‌ ಬಿಲ್ಡರ್ಸ್‌ ಸಂಸ್ಥೆ 6 ಡಬಲ್‌ ಡೆಕ್ಕರ್‌ ಬಸ್‌ ಗಳ ಬಾಡಿ ತಯಾರು ಮಾಡುತ್ತಿದೆ. ಪ್ರಾಯೋಗಿಕವಾಗಿ ಒಂದು ಬಸ್‌ ಸಿದ್ಧವಾಗಿದ್ದು, ಇದರಲ್ಲಿ ಒಟ್ಟು 40 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಇಂಟರ್‌ ನ್ಯಾಷನಲ್‌ ಸೆಂಟರ್‌ ಫಾರ್‌ ಅಟೋಮೋಟಿವ್‌ ಟೆಕ್ನಾಲಜಿ ತಂಡ ಫೆಬ್ರವರಿ ಮೊದಲ ವಾರದಲ್ಲಿ ಸಿದ್ಧವಾಗಿರುವ ಬಸ್‌ ನ ಪರಿಶೀಲನೆ ನಡೆಸಿದೆ.  ಅದರ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇವೆ. ಜೊತೆಗೆ ನೋದಂಣಿಗೂ ಅರ್ಜಿ ಸಲ್ಲಿಸಲಾಗಿದೆ ಎಂದು ಕೆಎಸ್‌ಟಿಡಿಸಿ ಎಂಡಿ ಕುಮಾರ್‌ ಪುಷ್ಕರ್‌ ಹೇಳಿದ್ದಾರೆ. ಮೈಸೂರಿಗೆ ನಾಲ್ಕು ಹಾಗೂ ಹಂಪಿಗೆ ಎರಡು ಡಬಲ್‌ ಡೆಕ್ಕರ್‌ ಬಸ್‌ ಗಳನ್ನು ನೀಡಲಾಗುತ್ತದೆಂದು ತಿಳಿದುಬಂದಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: