ಮೈಸೂರು

  ಪ್ರಯಾಣಿಕರ ಸೌಲಭ್ಯಗಳ ಸಮಿತಿ (ಪಿ.ಎ.ಸಿ.)ಯಿಂದ ಮೈಸೂರು ರೈಲ್ವೆ ನಿಲ್ದಾಣದ ಪರಿಶೀಲನೆ

ಮೈಸೂರು,ಫೆ.25:- ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಲ್ಲಿ ಒದಗಿಸಲಾದ ಪ್ರಯಾಣಿಕರ ಸೌಕರ್ಯಗಳನ್ನು ಪರಿಶೀಲಿಸಲು ರೈಲ್ವೆ ಸಚಿವಾಲಯ (ಎಂ.ಒ.ಆರ್.)ವು   ಪಿ.ಕೆ.ಕೃಷ್ಣದಾಸ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರಚಿಸಿರುವ ಪ್ರಯಾಣಿಕರ ಸೌಲಭ್ಯ ಸಮಿತಿಯು ನಿನ್ನೆ ಮೈಸೂರು ರೈಲ್ವೆ ನಿಲ್ದಾಣವನ್ನು ಪರಿಶೀಲಿಸಿತು.

ಸಮಿತಿಯ ಅಧ್ಯಕ್ಷರು ಮತ್ತು ನಾಲ್ವರು ಸದಸ್ಯರನ್ನು ಒಳಗೊಂಡ ಸಮಿತಿಯು, ಪ್ರಯಾಣಿಕರ ಕಾಯುವ ಕೋಣೆಗಳು, ಚಾಲ್ತಿ ಟಿಕೆಟ್ ಮತ್ತು ಮುಂಗಡ ಟಿಕೆಟ್ ಕಾಯ್ದಿರಿಸುವ ಕಛೇರಿಗಳು, ಪರಿಚಲನಾ ಪ್ರದೇಶದಲ್ಲಿರುವ ಪಾವತಿಸಿ ಬಳಸುವ ಶೌಚಾಲಯ, ವಾಹನ ನಿಲ್ದಾಣ ಸೌಲಭ್ಯಗಳು, ಪಾದಚಾರಿ ಮೇಲ್ಸೇತುವೆ, ಎಸ್ಕಲೇಟರ್‌ಗಳು ಮತ್ತು ಲಿಫ್ಟ್ ಗಳು,  ಭದ್ರತೆ ಮತ್ತು ಕಣ್ಗಾವಲು ವ್ಯವಸ್ಥೆ, ತಿನಿಸುಗಳ ಮತ್ತು ವಿವಿಧ ಮಳಿಗೆಗಳು ಹಾಗೂ ನಿಲ್ದಾಣದಲ್ಲಿ ಒದಗಿಸಲಾದ ಇತರೆ ವಿವಿಧ ಸೌಲಭ್ಯಗಳನ್ನು ಪರಿಶೀಲಿಸಿತು. ಸಮಿತಿಯು ಸೌಲಭ್ಯಗಳ ಪ್ರಮಾಣ ಮತ್ತು ನಿಲ್ದಾಣದಲ್ಲಿ ನಿರ್ವಹಿಸುತ್ತಿರುವ ಉನ್ನತ ಮಟ್ಟದ ಸ್ವಚ್ಛತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿತು.

ನಿಲ್ದಾಣದಲ್ಲಿ ಒದಗಿಸಲಾದ ಸೌಲಭ್ಯಗಳ ಬಗ್ಗೆ ಸಮಿತಿಯು ರೈಲು-ಬಳಕೆದಾರರೊಂದಿಗೆ ಸಂವಹನ ನಡೆಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿತು. ರೈಲ್ವೆ ಆವರಣ ಮತ್ತು ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯತೆಯ ಕುರಿತು ಮಾತನಾಡಿದ ಸಮಿತಿಯು, ಹೆಚ್ಚಿನ ಸಂಖ್ಯೆಯ ಮಹಿಳಾ ರೈಲ್ವೆ ಸಂರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ರೈಲ್ವೆಗಳು ಮತ್ತು ಸುರಂಗಮಾರ್ಗದಂತಹ ಪ್ರದೇಶಗಳಲ್ಲಿ ಜಾಗರೂಕತೆಯನ್ನು ಹೆಚ್ಚಿಸಬೇಕೆಂದು ತಿಳಿಸಿತಲ್ಲದೇ, ಟಿಕೆಟ್ ಪರಿಶೀಲನಾ ಸಿಬ್ಬಂದಿಯು ರೈಲು-ಬಳಕೆದಾರರಲ್ಲಿ ವಿಶ್ವಾಸ ತುಂಬುವಂತೆ ತಿಳಿಸಿತು. ನಿಲ್ದಾಣದ ಮುಖ್ಯ ಪ್ರವೇಶದ್ವಾರದಲ್ಲಿ ಬ್ಯಾಗೇಜ್ ಸ್ಕ್ಯಾನರ್‌ಗಳು ಮತ್ತು ಲೋಹ ಪರಿಶೋಧಕಗಳನ್ನು ಅಳವಡಿಸುವುದು ಸಮಿತಿಯ ಆಶಯವಾಗಿದ್ದರೂ ಸಹ, ರೈಲ್ವೆ ನಿಲ್ದಾಣದಲ್ಲಿ ಅನೇಕ ಪ್ರವೇಶಗಳು ಇರುವುದರಿಂದ ಮತ್ತು ಮಾರ್ಗ ಮಧ್ಯದಲ್ಲಿ ರೈಲು ಹತ್ತುವುದರಿಂದ ಇದು ಸಂಪೂರ್ಣವಾಗಿ ಪರಿಣಾಮಕಾರಿಯಾಗುವುದಿಲ್ಲ.

ಪರಿಶೀಲನೆಯ ನಂತರ ಸಮಿತಿಯು ಪ್ರಯಾಣಿಕರ ಸೌಲಭ್ಯಗಳಿಗೆ ಸಂಬಂಧಿಸಿದ ಹಲವಾರು ಪ್ರಮುಖ ವಿಷಯಗಳ ಕುರಿತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ   ಅಪರ್ಣಾ ಗರ್ಗ್ ಅವರೊಂದಿಗೆ ಚರ್ಚೆ ನಡೆಸಿತು.   ಗರ್ಗ್ ಅವರು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಲಿಮಿಟೆಡ್ (ಐ.ಆರ್‌.ಸಿ.ಟಿ.ಸಿ.) ಮೈಸೂರು ನಿಲ್ದಾಣದಲ್ಲಿ ‘ಫುಡ್ ಪ್ಲಾಜಾ’ ಸ್ಥಾಪಿಸುವ ಒಪ್ಪಂದವನ್ನು ಅಂತಿಮಗೊಳಿಸಲು ವಿಫಲವಾದ ಕಾರಣ ನಿಲ್ದಾಣವು ಇನ್ನೂ ಪೂರ್ಣ ಪ್ರಮಾಣದ, ದಿನಪೂರ್ತಿ ತೆರೆದಿರುವ ಕೆಟರಿಂಗ್ ಸೇವೆಗಳನ್ನು ಹೊಂದಿಲ್ಲವೆಂದು, ಮತ್ತು ಇದು ಸೆಪ್ಟೆಂಬರ್ 2019 ರಿಂದ ಬಾಕಿ ಉಳಿದಿರುವ ಕಾರಣಕ್ಕೆ ಪ್ರಯಾಣಿಕರ ಅನುಕೂಲದ ಮೇಲೆ ಪರಿಣಾಮ ಬೀರುವುದರ ಬಗ್ಗೆ ಒತ್ತಿ ಹೇಳಿದರು. ಅನುದಾನದ ಕೊರತೆಯು ಪ್ರಯಾಣಿಕರ ಸೌಲಭ್ಯವನ್ನು ಪೂರ್ಣಗೊಳಿಸುವುದರ ಮೇಲೆ ಪರಿಣಾಮ ಬೀರಿದೆ ಎಂದೂ ಸಹ ಡಿ.ಆರ್.ಎಂ. ತಿಳಿಸಿದರು. ಸಮಿತಿ ಇದನ್ನು ಪರಿಗಣಿಸಿತು. ಈ ಸಮಸ್ಯೆಗಳನ್ನು ಉನ್ನತ ಮಟ್ಟದಲ್ಲಿ ಚರ್ಚಿಸುವ ಬಗ್ಗೆ ಭರವಸೆ ನೀಡಿತು.

ಪ್ರವಾಸಿಗರ ದೃಷ್ಟಿಕೋನದಿಂದ ಸಂಭವನೀಯವಾಗಿ ಅತ್ಯಂತ ಪ್ರಮುಖ ಐತಿಹಾಸಿಕ ಸ್ಥಳವಾಗಿರುವ ಶ್ರೀರಂಗಪಟ್ಟಣವನ್ನೂ ಸಹ ಸಮಿತಿಯು ಪರಿಶೀಲಿಸಿತು. ನಿಲ್ದಾಣಗಳಲ್ಲಿ ವಿವಿಧ ರೈಲುಗಳನ್ನು ನಿಲ್ಲಿಸುವಂತೆ ಕೋರಿ ಹಲವಾರು ಪ್ರಾತಿನಿಧ್ಯಗಳನ್ನು ಸಮಿತಿಗೆ ಸಲ್ಲಿಸಲಾಯಿತು. ಕಾರ್ಯಾಚರಣೆ ಮತ್ತು ಸುರಕ್ಷತಾ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಈ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಬೇಕೆಂದು ಸಮಿತಿ ತಿಳಿಸಿತು.

ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ   ಎ.ದೇವಸಹಾಯಂ, ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ  ಎಸ್.ಜಿ.ಯತೀಶ್ , ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಪ್ರಿಯಾ ಶೆಟ್ಟಿ, ಮೈಸೂರು ವಿಭಾಗದ ಇತರ ಹಿರಿಯ ಶಾಖಾ ಅಧಿಕಾರಿಗಳು ತಪಾಸಣೆ ವೇಳೆ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: