ಮೈಸೂರು

ಮಾರ್ಚ್ 14ರಿಂದ ಚುನಾವಣಾ ಅಭ್ಯರ್ಥಿಗಳಿಗೆ ಉಮೇದುವಾರಿಕೆ ಸಲ್ಲಿಸಲು ಡಿ.ರಂದೀಪ್ ಸೂಚನೆ

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಂಜನಗೂಡು  ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಮಾರ್ಚ್ 14ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಅಂದಿನಿಂದ ಮಾರ್ಚ್ 21ರವರೆಗೆ ಸಾರ್ವಜನಿಕ ರಜಾ ದಿನವನ್ನು ಹೊರತುಪಡಿಸಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ಗಂಟೆಯವರೆಗೆ ಚುನಾವಣಾಧಿಕಾರಿ ನಂಜನಗೂಡು ಇಲ್ಲಿ ಉಮೇದುದಾರ ಅಥವಾ ಸೂಚಕರಲ್ಲಿ ಯಾರಾದರೊಬ್ಬರು ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಗೆ ಉಮೇದುವಾರಿಕೆಯನ್ನು ಸಲ್ಲಿಸಬೇಕು. ಚುನಾವಣೆ ಸಂಬಂಧ ಅಭ್ಯರ್ಥಿಯು ಎಲ್ಲಾ ದಾಖಲಾತಿಗಳನ್ನು ನಾಮಪತ್ರ ಸಲ್ಲಿಸುವ ಕಡೆಯ ದಿನವಾದ ಮಾ.21ರ ಮಧ್ಯಾಹ್ನ 3ಗಂಟೆಯೊಳಗೆ ಸಲ್ಲಿಸಬೇಕು ಎಂದು ತಿಳಿಸಿದರು ಎಂದರು.

ಭಾರತ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಚುನಾವಣೆಗೆ ಸ್ಪರ್ಧಿಸುವ ಒಬ್ಬ ಅಭ್ಯರ್ಥಿಯು ಗರಿಷ್ಠ 28ಲಕ್ಷಗಳನ್ನು ವೆಚ್ಚ ಮಾಡಬಹುದಾಗಿದೆ. ನೀತಿ ಸಂಹಿತೆಯನ್ನು ಜಾರಿಗೊಳಿಸುವ ಸಂಬಂಧ ಪ್ರತಿ 15-20 ಮತಗಟ್ಟೆಗಳಿಗೆ ಒಬ್ಬ ಸೆಕ್ಟರ್ ಅಧಿಕಾರಿಯನ್ನು ನೇಮಕ ಮಾಡಲಾಗಿರುತ್ತದೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸಭೆ, ಸಮಾರಂಭ ನಡೆಸುವ ಕಡೆ ಫ್ಲೈಯಿಂಗ್ ಸ್ಕ್ವಾಡ್ ಗಳನ್ನು ರಚಿಸಲಾಗುತ್ತದೆ. ಸಭೆ, ರ್ಯಾಲಿ ನಡಸಲು 24 ಮುಂಚಿತವಾಗಿ ಪೊಲೀಸ್ ಇಲಾಖೆ ಹಾಗೂ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಸಾರ್ವಜನಿಕ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಭಿತ್ತಿಪತ್ರ, ಕಟೌಟ್, ಪೋಸ್ಟರ್, ಬ್ಯಾನರ್ಸ್ ಗಳನ್ನು ಅನುಮತಿ ಇಲ್ಲದೇ ಹಾಕುವಂತಿಲ್ಲ. ಸಂಸದರು, ಶಾಸಕರು, ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು, ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವುದು ಉಳಿದ ತಾಲೂಕುಗಳಿಗೆ ಅನ್ವಯಿಸುವುದಿಲ್ಲ. ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಇವುಗಳಿಗೆ ಅವಕಾಶವಿಲ್ಲ. ಸರ್ಕಾರಿ ಕಾರ್ಯಕ್ರಮಗಳ ಕುರಿತು ಸಂಬಂಧಪಟ್ಟ ತಾಲೂಕು ತಹಶೀಲ್ದಾರ್ ಅವರಿಗೆ ಮುಂಚಿತವಾಗಿ ಮಾಹಿತಿಯನ್ನು ನೀಡಬೇಕು ಎಂದರು.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಟಿ.ವಿ, ಪತ್ರಿಕೆಗಳಲ್ಲಿ, ರೆಡಿಯೋ ಎಫ್.ಎಂ ಗಳಲ್ಲಿ ಜಾಹೀರಾತು ನೀಡುವವರು ಪ್ರಸಾರ ಮಾಡುವ ಮೊದಲು ಜಿಲ್ಲಾ ವಾರ್ತಾ ಆಧಿಕಾರಿಗಳ ಅನುಮತಿ ಪಡೆಯಬೇಕು. ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ತಿಳಿಸಿದರು.

ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ 236ಮತಗಟ್ಟೆಗಳಿದ್ದು, 1,01267 ಪುರುಷರು, 99,231ಮಹಿಳೆಯರು ಸೇರಿದಂತೆ ಒಟ್ಟು 2,00,498 ಮತದಾರರಿದ್ದಾರೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಚುನಾವಣಾಧಿಕಾರಿಗಳು, ಚುನಾವಣೆಗೆ ಸಂಭಂದಿಸಿದ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: