ಮೈಸೂರು

ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ಪಾತ್ರ ಬಹಳ ಪ್ರಮುಖವಾಗಿದೆ : ಶಾಸಕ ಜಿ. ಟಿ. ದೇವೇಗೌಡ

ಮೈಸೂರು,ಫೆ.26:- ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ನಿನ್ನೆ  “ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ತರಬೇತಿ ಶಿಬಿರ” ವನ್ನು ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕ ಜಿ. ಟಿ. ದೇವೇಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಶಿಕ್ಷಣ ವಂಚಿತರಿಗೆ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉತ್ತಮ ಬದುಕನ್ನು ಕಲ್ಪಿಸಿಕೊಟ್ಟಿದೆ. ಸಾವಿರಾರು ವಿದ್ಯಾರ್ಥಿಗಳು ಮುಕ್ತ ವಿಶ್ವವಿದ್ಯಾನಿಲಯದಿಂದ, ಪದವಿಯನ್ನು ಪಡೆದು ವಿವಿಧ ಇಲಾಖೆಗಳಲ್ಲಿ ಉದ್ಯೋಗವನ್ನು ಪಡೆದು ಜೀವನ ಸಾಗಿಸುತ್ತಿದ್ದಾರೆ. ಮುಕ್ತ ವಿವಿಯು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯೊಂದಿಗೆ ಶಿಕ್ಷಣವನ್ನು ನೀಡುತ್ತಿದೆ. ಹಾಗೆಯೇ ವಿವಿಧ ಕಾರಣಗಳಿಂದಾಗಿ ಶಿಕ್ಷಣವನ್ನು ಮುಂದುವರಿಸದೇ ಇರುವವರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶಾತಿ ಪಡೆದು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿಕೊಳ್ಳಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.

ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಕಲಿಯುವ ವಿದ್ಯಾರ್ಥಿಗಳ ಸಂಖ್ಯೆಯ ಪ್ರಮಾಣವೇ ಹೆಚ್ಚಾಗಿದೆ. ಮುಕ್ತ ವಿಶ್ವವಿದ್ಯಾನಿಲಯವು ಪದವಿ ಮತ್ತು ಉನ್ನತ ಶಿಕ್ಷಣವನ್ನು ನೀಡುವುದರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಬರುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ, ಬ್ಯಾಂಕಿಂಗ್, ಎಸ್‌ಡಿಸಿ/ಎಫ್‌ಡಿಸಿ, ಐ.ಎ.ಎಸ್/ಕೆ.ಎ.ಎಸ್, ನೆಟ್, ಕೆ-ಸೆಟ್ ಮುಂತಾದ ಹುದ್ದೆಗಳಿಗೆ ತರಬೇತಿ ನೀಡುತ್ತಿರುವುದು ತುಂಬಾ ಶ್ಲಾಘನೀಯವಾದ ವಿಚಾರವಾಗಿದೆ. ಕೆ-ಸೆಟ್ (ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ) ತರಬೇತಿ ಶಿಬಿರದ ಕಾರ್ಯಕ್ರಮವನ್ನು ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಈ ತರಬೇತಿಯನ್ನು ನಡೆಸಿಕೊಡುವ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಂಯೋಜನಾಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ಹಾಗೂ ವಿಶ್ವವಿದ್ಯಾನಿಲಯದ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ದೂರಶಿಕ್ಷಣವನ್ನು ನೀಡುವಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ವಿವಿಧ ವಯೋಮಾನದ ವ್ಯಕ್ತಿಗಳು ಈ ವಿಶ್ವವಿದ್ಯಾನಿಲಯದಿಂದ ಶಿಕ್ಷಣವನ್ನು ಪಡೆದು ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ವಿಶ್ವವಿದ್ಯಾನಿಲಯವು ಇನ್ನೂ ಹೆಚ್ಚಿನ ಮಟ್ಟದಲ್ಲಿ ಕ್ರಿಯಾಶೀಲವಾಗಿ ಈ ರಾಜ್ಯ ವ್ಯಾಪ್ತಿ ಎಲ್ಲಾ ಜಿಲ್ಲೆಗಳಲ್ಲೂ ಮುಕ್ತ ವಿಶ್ವವಿದ್ಯಾನಿಲಯದಲ್ಲಿರುವ ಶಿಕ್ಷಣ ಕ್ರಮಗಳು ಮತ್ತು ಕೋರ್ಸ್‌ಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ ಮನೆಮನೆಗೂ ದೂರಶಿಕ್ಷಣವನ್ನು ತಲುಪಿಸುವ ಕಾರ್ಯವನ್ನು ಸಮರ್ಪಕವಾಗಿ ನಿಭಾಯಿಸಿದಾಗ ಮುಕ್ತ ವಿವಿಯು ಉನ್ನತ ಮಟ್ಟದಲ್ಲಿ ಗುರುತಿಸಲ್ಪಡಲು ಸಹಾಯಕಾರಿಯಾಗುತ್ತದೆ.

ಮುಕ್ತ ವಿಶ್ವವಿದ್ಯಾನಿಲಯವು ಗ್ರಾಮೀಣಪ್ರದೇಶದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪಡೆದಿರುವ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಕೋರ್ಸ್‌ಗಳನ್ನು ನಡೆಸುವ ಮೂಲಕ ಮತ್ತು ತರಬೇತಿಯನ್ನು ಏರ್ಪಡಿಸುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಮತ್ತು ವಿಕಾಸಕ್ಕೆ ಕೊಡುಗೆಯನ್ನು ನೀಡಬೇಕು. ಮುಕ್ತವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳು ಕರ್ನಾಟಕ ರಾಜ್ಯದ ಬಹುಪಾಲು ಜಿಲ್ಲೆಗಳಲ್ಲಿ ಇರುವುದರಿಂದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಆಯಾಯ ಜಿಲ್ಲೆಯ ಪ್ರಾದೇಶಿಕ ಕೇಂದ್ರಗಳಲ್ಲಿ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ವಿವಿಧ ಹುದ್ದೆಗಳಿಗೆ ತರಬೇತಿಯನ್ನು ನಡೆಸಿದಾಗ ಮುಕ್ತ ವಿವಿಯ ಸಂಪನ್ಮೂಲಗಳು ಸಮರ್ಪಕವಾಗಿ ಸದ್ಬಳಕೆಯಾಗುತ್ತವೆ. ವಿವಿಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಉತ್ತಮವಾಗಿ ನಡೆಯುತ್ತಿರುವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯೋಗ ಮೇಳ, ವಿವಿಧ ತರಬೇತಿ ಕಾರ್ಯಕ್ರಮಗಳು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಚಾರ ಸಮ್ಮೇಳನಗಳಿಂದಾಗಿ ಮುಕ್ತ ವಿಶ್ವವಿದ್ಯಾನಿಲಯದ ಬಗ್ಗೆ ಸಾರ್ವಜನಿಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಮನೋಭಾವ ಕಂಡುಬರುತ್ತಿದೆ. ಮುಕ್ತ ವಿವಿಯು ಗುಣಮಟ್ಟದ ಶಿಕ್ಷಣವನ್ನು ನೀಡುವುದರೊಂದಿಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ವಿವಿಯಾಗಿ ಗುರುತಿಸಿಕೊಳ್ಳಲು ಪ್ರಯತ್ನಿಸಬೇಕು.

ಪ್ರಸ್ತುತ ಕೆ-ಸೆಟ್ ಪರೀಕ್ಷಾ ತರಬೇತಿ ಶಿಬಿರದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಶ್ರದ್ಧೆ ಮತ್ತು ಏಕಾಗ್ರತೆಯಿಂದ ತರಬೇತಿಯಲ್ಲಿ ಭಾಗವಹಿಸಿ ಸಮಯ ಪರಿಪಾಲನೆ ಮತ್ತು ಶಿಸ್ತನ್ನು ರೂಢಿಸಿಕೊಂಡಾಗ ಮಾತ್ರ ತಾವು ಯಶಸ್ಸನ್ನು ಪಡೆಯಬಹುದು. ಸಾಮಾನ್ಯ ಜ್ಞಾನ ಮತ್ತು ವಸ್ತುವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ ಅರ್ಥಮಾಡಿಕೊಂಡಾಗ ಯಾವುದೇ ಪರೀಕ್ಷೆಯನ್ನಾದರೂ ವಿದ್ಯಾರ್ಥಿಗಳಾದ ನೀವು ಸುಲಭವಾಗಿ ಎದುರಿಸಬಹುದು. ಪರಿಶ್ರಮ ಮತ್ತು ಪ್ರಯತ್ನದಿಂದ ಮಾತ್ರ ಗುರಿಯನ್ನು ಮುಟ್ಟಲು ಸಾಧ್ಯ ಎಂಬುದನ್ನು ವಿದ್ಯಾರ್ಥಿಗಳಾದ ನೀವು ಅರ್ಥಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಿ ಉತ್ತಮ ಬೋಧಕರಾಗಿ ಈ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು ಎಂದು  ತಿಳಿಸಿದರು.

ಕಾರ್ಯಕ್ರಮದಲ್ಲಿ ಕರಾಮುವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಜೈನಹಳ್ಳಿ ಸತ್ಯನಾರಾಯಣ ಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: