ಮೈಸೂರು

ಮಾರ್ಚ್ ಅಂತ್ಯದಲ್ಲಿ ಜಿಲ್ಲಾಧಿಕಾರಿ ಕಛೇರಿ ನೂತನ ಕಛೇರಿ ಕಟ್ಟಡಕ್ಕೆ ಶಿಫ್ಟ್ ಆಗುವ ಸಾಧ್ಯತೆ

ಮೈಸೂರು,ಫೆ.26:- ಜಿಲ್ಲಾಧಿಕಾರಿ ಕಛೇರಿಯ ನೂತನ ಕಛೇರಿಗೆ ಉದ್ಘಾಟನೆ ಭಾಗ್ಯ ಕೊನೆಗೂ ಸಿಗುವಂತೆ ಕಾಣಿಸುತ್ತಿದ್ದು, ಮಾರ್ಚ್ ಮಧ್ಯ ಅಥವಾ  ಅಂತ್ಯದಲ್ಲಿ ಜಿಲ್ಲಾಧಿಕಾರಿ ಕಛೇರಿ ನೂತನ ಕಛೇರಿ ಕಟ್ಟಡಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿಲ್ಲಾಧಿಕಾರಿಗಳ ನೂತನ ಕಛೇರಿ ಸಿದ್ದಾರ್ಥ ನಗರದಲ್ಲಿ ನಿರ್ಮಾಣವಾಗಿದ್ದು, ಹೊಸ ಕಛೇರಿಗೆ ಶಿಫ್ಟ್ ಆಗಲು ಕೊನೆಯ ಹಂತದ ಸಿದ್ದತೆ ಕಾರ್ಯ ಭರದಿಂದ ಸಾಗುತ್ತಿದೆ. ಜಿಲ್ಲಾಧಿಕಾರಿಗಳ ನೂತನ ಕಛೇರಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಲೋಕಾರ್ಪಣೆಗೊಂಡಿತ್ತು. ಹಲವಾರು ಕಾರಣಗಳಿಂದ ಒಂದೂವರೆ ವರ್ಷದಿಂದ ಶಿಪ್ಟಿಂಗ್ ಕಾರ್ಯಕ್ಕೆ ಅಡ್ಡಿಯುಂಟಾಗಿತ್ತು. ಶಿಪ್ಟಿಂಗ್ ತಡವಾದ ಹಿನ್ನೆಲೆಯಲ್ಲಿ ಕಛೇರಿ  ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದವು.

ಈ ಕುರಿತು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿ ನೂತನ ಕಚೇರಿಯಲ್ಲಿ 34 ರಿಂದ 40 ಲಕ್ಷದ ಕೇಬಲಿಂಗ್ ಬಿಲ್ ಬಾಕಿ ಉಳಿದಿತ್ತು. ಕೇಬಲಿಂಗ್ ಬಿಲ್ ಬಾಕಿ ಉಳಿದಿದ್ದರಿಂದ ಕೆಲಸಗಳು ಸಂಪೂರ್ಣ ಆಗಿರಲಿಲ್ಲ. ಈಗ ಮತ್ತೆ ಅನುಮತಿ ಪಡೆದು ಶಾರ್ಟ್ ಟೈಂ ಟೆಂಡರ್ ಕರೆದು ಕೆಲಸ ಪ್ರಾರಂಭಿಸಿದ್ದೇವೆ. ಇನ್ನು ಎರಡು ವಾರದಲ್ಲಿ ಕೇಬಲಿಂಗ್ ಕೆಲಸ ಮುಕ್ತಾಯ ವಾಗಲಿದೆ. ನಮ್ಮ ಎಲ್ಲ ಕಡತಗಳು ತತ್ರಾಂಶದಲ್ಲಿದೆ. ಆದ್ದರಿಂದ ನಮಗೆ ಸರ್ಕಾರಿ ನೆಟ್ ವರ್ಕ್ ಬೇಕಾಗುತ್ತೆ, ಯಾವುದೇ ಖಾಸಗಿ ನೆಟ್ ವರ್ಕ್ ನಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ. ಈಗ ನೆಟ್ವರ್ಕ್ ಕೆಲಸ ಮುಗಿಯುತ್ತ ಬಂದಿದೆ, ಆ ಕೆಲಸ ಮುಗಿದ ತಕ್ಷಣ ನೂತನ ಕಟ್ಟಡಕ್ಕೆ ಶಿಫ್ಟ್ ಆಗಲಿದ್ದೇವೆ. ಅಲ್ಲಿಗೆ ಶಿಫ್ಟ್ ಆದ ನಂತರ ಕೆಲಸಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಎಲ್ಲಾ ಕೆಲಸದ ಮುಕ್ತಾಯದ ನಂತರ ಶಿಫ್ಟ್ ಆಗಲಿದ್ದೇವೆ. ಮಾರ್ಚ್ ನ ಒಳಗೆ ಶಿಫ್ಟ್ ಆಗುವುದಕ್ಕೆ ಸಿದ್ದತೆ ನಡೆಸಿದ್ದೇವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: