ಮೈಸೂರು

ಎಲ್ಲಾ ಖಾಸಗಿ ಶಾಲೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕುವಂತೆ ಒತ್ತಾಯಿಸಿ ಮನವಿ

ಮೈಸೂರು,ಫೆ.26:-  -ಮೈಸೂರು ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಶಾಲೆಗಳ ನಾಮಫಲಕಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಹಾಕುವಂತೆ ಹಾಗೂ ಶಾಲಾ ಕಾಲೇಜುಗಳ ಸೂಚನಾ ಫಲಕಗಳಲ್ಲಿ ಶಾಲಾ ಶುಲ್ಕದ ದರ ಪಟ್ಟಿಯನ್ನು ಕಡ್ಡಾಯವಾಗಿ ಹಾಕುವಂತೆ ಆದೇಶ ಹೊರಡಿಸಬೇಕೆಂದು  ಒತ್ತಾಯಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ರವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಖಾಸಗಿ ಶಾಲಾ ನಾಮಫಲಕಗಳಲ್ಲಿ ಆಂಗ್ಲಭಾಷೆಯೇ ಇದೆ. ಜೊತೆಗೆ ಮಕ್ಕಳನ್ನು ಬಿಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲಾ ವಾಹನಗಳ ಮೇಲೂ ಹಾಗೂ ಅವರು ನೀಡುವ ಶುಲ್ಕ ರಶೀದಿ ಯಲ್ಲೂ ಕೂಡ ಬರೀ ಆಂಗ್ಲಭಾಷೆಯೇ ಇದೆ. ನಮ್ಮ ನಾಡಿನ ನೆಲ ಜಲವನ್ನು ಈ ಖಾಸಗಿ ಶಿಕ್ಷಣ ಸಂಸ್ಥೆಗಳು ಬಳಸಿಕೊಂಡು ನಾಮಫಲಕದಲ್ಲಿ ಕನ್ನಡವನ್ನು ಬಳಸುವುದನ್ನೇ ಸಂಪೂರ್ಣ ನಿರ್ಲಕ್ಷ್ಯಿಸಿದ್ದಾರೆ. “ನಾಮಫಲಕ ಕನ್ನಡದಲ್ಲಿದ್ದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ”ಎಂದು ಎಚ್ಚರಿಸುತ್ತೇವೆ. ನಾವು ಮುಂದಿನ ದಿನಗಳಲ್ಲಿ ಬೃಹತ್ ಕನ್ನಡ ನಾಮಫಲಕ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದಕ್ಕೆ ತಮ್ಮ ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಮ್ಮ ಜತೆಗಿದ್ದು ಕನ್ನಡವನ್ನು ಉಳಿಸಿ, ಬೆಳಸಲು ಸಹಕರಿಸಬೇಕು. ಸರ್ಕಾರಿ ಆದೇಶದಂತೆ ಶೇ60 ಭಾಗ ನಾಮಪಲಕ ಕಡ್ಡಾಯವಾಗಿ ಕನ್ನಡದಲ್ಲಿ ಪ್ರಧಾನವಾಗಿ ಹಾಕಬೇಕು. ಈ ಆದೇಶದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ನಾಮಫಲಕಗಳನ್ನು ಪ್ರಧಾನವಾಗಿ ಕನ್ನಡದಲ್ಲಿ ಇರಬೇಕೆಂಬ ಆದೇಶವನ್ನು ಮತ್ತಷ್ಟು ಬಲಪಡಿಸಲು ತಾವು ಈ ಕೂಡಲೇ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಭೆ ಕರೆದು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಿ ಬಿ ಎಸ್ ಸಿ & ಐಸಿಎಸ್ ಸಿ ಶಾಲೆಗಳಿಗೆ ಆದೇಶವನ್ನು ಹೊರಡಿಸಬೇಕು ಎಂದರು.

ಮುಂಬರುವ ಶೈಕ್ಷಣಿಕ ವರ್ಷದ ಒಳಗೆ ಅಂದರೆ ಜೂನ್ 2020 ರ ಒಳಗೆ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು, ನಾಮಫಲಕಗಳಲ್ಲಿ ಶೇ 60 ಭಾಗ ಪ್ರಧಾನವಾಗಿ ಕನ್ನಡ ಕಡ್ಡಾಯವಾಗಿ ಹಾಕಬೇಕು ಹಾಗೂ ಶಾಲಾ ಕಾಲೇಜುಗಳ ಸೂಚನಾ ಫಲಕಗಳಲ್ಲಿ  ಶಾಲಾ ಶುಲ್ಕದ ದರಪಟ್ಟಿಯನ್ನು ಕಡ್ಡಾಯವಾಗಿ ಹಾಕಬೇಕು. ಈ ಖಾಸಗಿ ಶಿಕ್ಷಣ ಸಂಸ್ಥೆಗಳು ನೀಡುವ  ರಶೀದಿಯನ್ನು ಕನ್ನಡದಲ್ಲೇ ನೀಡಬೇಕೆಂದು ಆದೇಶ ಹೊರಡಿಸಬೇಕೆಂದು   ಮನವಿ ಸಲ್ಲಿಸಿದ್ದೇವೆ ಎಂದರು.

ಈ ಸಂದರ್ಭ    ಡಾ. ಶಾಂತರಾಜೇ ಅರಸ್ ಪಿ, ಶಾಂತಮೂರ್ತಿ ಆರ್, ವಿಜಯೇಂದ್ರ, ಪಿ, ಪ್ರಭುಶಂಕರ್, ಎಂ ಬಿ,ಅಕ್ಷಯ್, ರಾಜೇಶ್, ಮೊಗಣ್ಣಾಚಾರ್, ಮಿನಿಬಂಗಾರಪ್ಪ, ದರ್ಶನ್ ಗೌಡ, ನಂದಕುಮಾರ್ ಪರಿಸರ ಚಂದ್ರು, ನಂಜುಂಡಸ್ವಾಮಿ, ಸ್ವಾಮಿ, ಕಲೀಂ, ರವಿತೇಜ, ನಾಜೀರ್, ಸಿ ಕೃಷ್ಣ, ಗೊರೂರು ಮಲ್ಲೇಶ್  ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: