ದೇಶಪ್ರಮುಖ ಸುದ್ದಿ

ಪೊಲೀಸರನ್ನು ನಂಬಬೇಕು, ಅವರು ಕರ್ತವ್ಯ ನಿರತರಾಗಿದ್ದಾರೆ: ಅಜಿತ್ ದೋವಲ್

ನವದೆಹಲಿ,ಫೆ.26-ದಿಲ್ಲಿಯಲ್ಲಿ ಸಾಕಷ್ಟು ಪೊಲೀಸ್ ಪಡೆಗಳು ಕರ್ತವ್ಯ ನಿರತರಾಗಿವೆ. ಪೊಲೀಸರನ್ನು ನಂಬಬೇಕು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಅವರು ಈ ವಿವರಗಳನ್ನು ನೀಡಿದ್ದಾರೆ. ನಾಗರಿಕರಲ್ಲಿ ಅಭದ್ರತೆ ಇದೆ. ಎಲ್ಲಾ ಸಮುದಾಯಗಳಿಂದ ಭಯದ ಭಾವವನ್ನು ಹೋಗಲಾಡಿಸಲು ನಾವು ಬಯಸುತ್ತೇವೆ. ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕಾನೂನು ಪಾಲನೆ ಮಾಡುವ ನಾಗರಿಕರಿಗೆ ಯಾವುದೇ ರೀತಿಯೊಂದಲೂ ತೊಂದರೆಯಾಗುವುದಿಲ್ಲ ಎಂದು ಭರವಸೆ ನೀಡಿರುವ ಅವರು, ದಿಲ್ಲಿ ಪೊಲೀಸರ ಸಾಮರ್ಥ್ಯ ಮತ್ತು ಉದ್ದೇಶಗಳನ್ನು ಜನರು ಅನುಮಾನಿಸುತ್ತಿದ್ದಾರೆ. ಇದನ್ನು ಪರಿಹರಿಸಬೇಕಾಗಿದೆ. ಸಮವಸ್ತ್ರದಲ್ಲಿರುವ ಪೊಲೀಸರ ಮೇಲೆ ಜನ ನಂಬಿಕೆ ಇಡಬೇಕು ಎಂದಿದ್ದಾರೆ.

ಎಲ್ಲಾ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕೈಯಲ್ಲಿ ಬಂದೂಕು ಹಿಡಿದು ದಿಲ್ಲಿ ಬೀದಿಯಲ್ಲಿ ಯಾರೂ ತಿರುಗಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಅಜಿತ್ ದೋವಲ್ ಗಲಭೆ ಪೀಡಿತ ಪ್ರದೇಶಗಳಾದ ಸೀಲಾಂಪುರ, ಜಫ್ರಾಬಾದ್‌, ಮೌಜ್‌ಪುರ್‌ ಮತ್ತು ಗೋಕುಲ್‌ಪುರಿ ಚೌಕ್‌ ಗೆ ಮಂಗಳವಾರ ತಡ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಹಿಂಸಾಚಾರದ ವೇಳೆ ನಿಷ್ಕ್ರಿಯತೆ ತೋರಿದ, ಅಸಮರ್ಪಕವಾಗಿ ನಡೆದುಕೊಂಡ ಕಾರಣಕ್ಕೆ ಪೊಲೀಸರ ಮೇಲೆ ಕಟು ಟೀಕೆಗಳು ವ್ಯಕ್ತವಾಗಿವೆ. ಸುಪ್ರೀಂ ಕೋರ್ಟ್‌ ಕೂಡ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಭಾನುವಾರದಿಂದ ದಿಲ್ಲಿಯಲ್ಲಿ ನಡೆಯುತ್ತಿರುವ ಸಿಎಎ ಪರ ವಿರೋಧ ಗಲಭೆ ಕೋಮು ಸಂಘರ್ಷವಾಗಿ ತಿರುವು ಪಡೆದುಕೊಂಡಿದ್ದು, ಬುಧವಾರದ ವೇಳೆಗೆ 18 ಮಂದಿ ಮೃತಪಟ್ಟಿದ್ದಾರೆ. (ಎಂ.ಎನ್)

Leave a Reply

comments

Related Articles

error: