ದೇಶ

ಶಾಂತಿ ಕಾಪಾಡುವಂತೆ ಮನವಿ ಮಾಡಿದ ಸೆಹ್ವಾಗ್, ಯುವರಾಜ್, ಹರ್ಭಜನ್

ನವದೆಹಲಿ,ಫೆ.26-ಶಾಂತಿ ಕಾಪಾಡುವಂತೆ ದೆಹಲಿ ಜನರಲ್ಲಿ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಹಾಗೂ ಹರ್ಭಜನ್‌ ಸಿಂಗ್‌ ಮನವಿ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ವೀರೇಂದ್ರ ಸೆಹ್ವಾಗ್, ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ದುರದೃಷ್ಟಕರ. ಶಾಂತವಾಗಿರುವಂತೆ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತೇನೆ. ಯಾರೊಬ್ಬರಿಗೆ ಆಗುವ ಗಾಯ ಅಥವಾ ಯಾರೊಬ್ಬರು ಮಾಡುವ ದಾಳಿಯು ರಾಷ್ಟ್ರ ರಾಜಧಾನಿಗೆ ಅಂಟುವ ಕಳಂಕವಾಗಲಿದೆ. ಶಾಂತಿ ಮೂಡಲಿ ಮತ್ತು ಎಲ್ಲರಿಗೂ ತಿಳುವಳಿಕೆ ಬರಲೆಂದು ಆಶಿಸುತ್ತೇನೆ ಎಂದಿದ್ದಾರೆ.

ಯುವರಾಜ್ ಸಿಂಗ್, ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವು ಹೃದಯವನ್ನು ಘಾಸಿಗೊಳಿಸುವಂತದ್ದು. ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಪ್ರತಿಯೊಬ್ಬರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ. ಏನೇ ಆದರೂ ಕೊನೆಗೆ ನಾವೆಲ್ಲರೂ ಮನುಷ್ಯರೇ. ನಮೆಗೆಲ್ಲ ಪ್ರೀತಿ, ಗೌರವದ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಹರ್ಭಜನ್‌ ಸಿಂಗ್‌, ನಮ್ಮವರೇ ನಮ್ಮವರನ್ನು ಏಕೆ ಹೊಡೆಯುತ್ತಿದ್ದಾರೆ. ಪರಸ್ಪರ ನೋಯಿಸಿಕೊಳ್ಳದೆ ಶಾಂತಿಯಿಂದಿರಿ ಎಂದು ಮನವಿ ಮಾಡಿದ್ದಾರೆ.

ಸಿಎಎ ಪರ ಮತ್ತು ವಿರೋಧದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದೆ. ಹಿಂಸಾಚಾರದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: