
ಮೈಸೂರು
ವಿದ್ಯಾರ್ಥಿಗಳು ಕೇವಲ ಸಂಬಳ ಪಡೆಯುವ ಕೆಲಸ ಪಡೆಯುವ ಕನಸು ಕಾಣದೇ, ಸಂಬಳ ಕೊಡುವಂತಹ ಉದ್ಯಮಿಗಳಾಗುವ ಕನಸು ಕಾಣಬೇಕು : ಡಾ.ವೈ ಡಿ ರಾಜಣ್ಣ
ಮೈಸೂರು,ಫೆ.26:- ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ವಿನಾಯಕ ದಾಮೋದರ್ ಸಾವರ್ಕರ್ ಕ್ರಾಂತಿಕಾರಿ ದೇಶಭಕ್ತನ ಪುಣ್ಯತಿಥಿಯ ಅಂಗವಾಗಿ ಸತ್ಯಮೇವ ಜಯತೆ ಕಾರ್ಯಕ್ರಮವನ್ನು ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ವಿದ್ಯಾಸಂಸ್ಥೆಯ ಆವರಣದಲ್ಲಿಂದು ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಸ್ಮರಿಸಲಾಯಿತು.
ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ.ವೈ ಡಿ ರಾಜಣ್ಣ ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನು ಭಾರತದ ಸ್ವತಂತ್ರಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ಲೇಖಕ, ಇತಿಹಾಸಕಾರ. ಅವರು ಕೇವಲ ವ್ಯಕ್ತಿಯಲ್ಲ, ಒಂದು ವಿಚಾರ. ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಅರ್ಪಿಸುವ ವಿಚಾರ, ತಮ್ಮ ಶರೀರದ ಕಣ ಕಣ, ಜೀವನದ ಕ್ಷಣ ಕ್ಷಣವನ್ನೂ ಸಮರ್ಪಿಸುವ ವಿಚಾರ. ಅಸ್ಪೃಶ್ಯತೆ ಮತ್ತು ಸಾಮರಸ್ಯಕ್ಕಾಗಿ ಹೋರಾಡಿದ ಅಪ್ರತಿಮ ನಾಯಕ. ವಿದ್ಯಾರ್ಥಿಗಳು ಕೇವಲ ಸಂಬಳ ಪಡೆಯುವ ಕೆಲಸ ಪಡೆಯುವ ಕನಸು ಕಾಣದೇ, ಸಂಬಳ ಕೊಡುವಂತಹ ಉದ್ಯಮಿಗಳಾಗುವ ಕನಸು ಕಾಣಬೇಕು. ಭಾರತೀಯರು ಸಂಘಟಿತರಾಗಿ ದುಡಿಯುವ ಮೂಲಕ ರಾಷ್ಟ್ರನಿರ್ಮಾಣ ಮಾಡಬೇಕಿದೆ ಎಂದು ಕರೆ ನೀಡಿದರು.
ನಂತರ ಮಾತನಾಡಿದ ಚಾಮುಂಡೇಶ್ವರಿ ಮಂಡಲ ಅಧ್ಯಕ್ಷರಾದ ಬಿಎಂ ರಘು ಅದ್ಭುತ ವಾಗ್ಮಿಯಾಗಿದ್ದ ಸಾವರ್ಕರ್ ಅವರು ದೇಶಭಕ್ತರನ್ನು ಸಂಘಟನೆ ಮಾಡಿ ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಮಾಡಿದರು’ ಸಾವರ್ಕರ್ ಕೇವಲ ಹಿಂದುತ್ವಕ್ಕಾಗಿ ಮಾತ್ರ ಹೋರಾಡಲಿಲ್ಲ. ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು. ಬ್ರಿಟಿಷರ ನೆಲವನ್ನೇ ಹೊಕ್ಕಿ ಅವರ ವಿರುದ್ಧ ಹೋರಾಡಲು ‘ಅಭಿನವ ಭಾರತ’ ಎಂಬ ಸಂಘಟನೆ ಹುಟ್ಟುಹಾಕಿ, ತಮ್ಮ ಬರವಣಿಗೆಗಳ ಮೂಲಕ ಕ್ರಾಂತಿ ಕಾರಿಗಳನ್ನು ಪ್ರೇರೇಪಿಸಿದರು ಎಂದರು.
ಬ್ರಿಟಿಷರಿಂದ ಬಂಧಿತರಾಗಿ, ಭಾರತದ ಅಂಡಮಾನ್ನಲ್ಲಿನ ಸೆಲ್ಯುಲರ್ ಜೈಲಿನಲ್ಲಿ ಕಠಿಣ ಶಿಕ್ಷೆಗೆ ಗುರಿಯಾದರು. ತಮ್ಮ ಜೀವಿತಾವಧಿಯ 11 ವರ್ಷಗಳನ್ನು ಕೈ-ಕಾಲುಗಳಿಗೆ ಕೋಳ ಹಾಕಿಸಿಕೊಂಡು, ಬೆಳಕೇ ಕಾಣದ ಜೈಲಿನ ನೆಲಮಾಳಿಗೆಯ ಚಿಕ್ಕ ಕೋಣೆಯಲ್ಲಿ ಕಳೆದರು. ಜೈಲಿನ ಕೋಣೆಯ ಗೋಡೆಗಳ ಮೇಲೆ ಕ್ರಾಂತಿಕಾರಿ ಕವಿತೆಗಳನ್ನು ಬರೆದು ಅವೆಲ್ಲವನ್ನು ಬಾಯಿಪಾಠ ಮಾಡಿ ಜೈಲಿನಿಂದ ಬಿಡುಗಡೆಯಾದ ನಂತರ ‘ಕಮಲಾ’ ಎನ್ನುವ ಕೃತಿ ರಚಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಮೇಲೆಯೂ ಜಾತೀಯತೆ ನಿವಾರಣೆಗೆ ಶ್ರಮಿಸಿದರು. ಆದರೆ ಸ್ವಾತಂತ್ರ್ಯ ಬಂದ ಮೇಲೆ ಅವರ ಮಾತುಗಳಿಗೆ ಬೆಲೆ ಕೊಡದೇ ಅವರನ್ನು ಮೂಲೆಗುಂಪು ಮಾಡಲಾಯಿತು. ನೆಲದ ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡಿದ ಸಾವರ್ಕರ್ ಇಂದಿಗೂ ತಮ್ಮ ವಿಚಾರಧಾರೆಗಳಿಂದ ಯುವಪೀಳಿಗೆಗೆ ಪ್ರೇರಣೆಯಾಗಿದ್ದಾರೆ ಎಂದು ಸ್ಮರಿಸಿದರು. ,ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ,ಮಹರ್ಷಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ತೇಜಸ್ ಶಂಕರ್ , ಬಿಜೆಪಿ ಮಹಿಳಾ ಮುಖಂಡರು ಲಕ್ಷ್ಮೀದೇವಿ ,ಮಧು ಎನ್ ಪೂಜಾರ್ ,ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)