ಮೈಸೂರು

ಸಂಗೀತ ಕಲೆಯನ್ನು ಉಳಿಸುವತ್ತ ಪ್ರಾಮಾಣಿಕ ಪ್ರಯತ್ನ ಅಗತ್ಯ : ಮರಿತಿಬ್ಬೇಗೌಡ

ಮೈಸೂರು.ಫೆ.26:-  ನಮ್ಮ ಪ್ರಾಚೀನ ಕಲೆಗಳಲ್ಲೊಂದಾದ ಸಂಗೀತಕಲೆಯನ್ನು ಉಳಿಸುವತ್ತ ಪ್ರಾಮಾಣಿಕ ಪ್ರಯತ್ನದ ಅಗತ್ಯ ಇದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಉಪಸಭಾಪತಿಯವರಾದ ಮರಿತಿಬ್ಬೇಗೌಡ ಹೇಳಿದರು.

ಅವರು ಇಂದು ಬೆಳಿಗ್ಗೆ ನಗರದ ಪೀಪಲ್ ಪಾರ್ಕಿನಲ್ಲಿರುವ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ 60ನೇ ಶಾಲಾ ವಾರ್ಷಿಕೋತ್ಸವ ಹಾಗೂ ಜಿಲ್ಲಾ ಮಟ್ಟದ ಸಂಗೀತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಕೆಲವು ದಶಕಗಳ ಹಿಂದೆ ಮನರಂಜನೆಗಾಗಿ ಗಣೇಶೋತ್ಸವ, ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜಿಸುವುದರ ಮೂಲಕ ಭಕ್ತಾದಿಗಳಿಗೆ ರಸದೌತಣ ನೀಡಲಾಗುತಿತ್ತು, ಆದರೆ ಇತ್ತೀಚೆಗೆ ವಿದ್ಯುನ್ಮಾನ ಜಾಲಗಳಾದ ಟಿ.ವಿ, ಮೊಬೈಲ್, ವೆಬ್ ಸೈಟ್ ಗಳ ಆಗಮನದಿಂದಾಗಿ ಒಂದು ಕಾಲದಲ್ಲಿ ಖ್ಯಾತಿಗಳಿಸಿದ್ದ ಸಂಗೀತ ಕಲೆ ಅವಸಾನದತ್ತ ಸಾಗಿದೆ ಇದನ್ನು ಉಳಿಸುವ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯತೆ ಇದೆ ಎಂದರು.

ಸಂಗೀತ ಕಲೆ ಬಹಳ ಕಷ್ಟಕರವಾದುದು. ಅದನ್ನು ಪ್ರತಿ ದಿನ ಅಭ್ಯಾಸಮಾಡದೆ ಇದ್ದಲ್ಲಿ ಹೆಚ್ಚಿನ ಸಾಧನೆ ಮಾಡಲಾಗದು. ಆದರೂ ಸಹ ಕೆಲವು ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಸಂಗೀತ ಕಲೆಯನ್ನು ಅಭ್ಯಾಸಮಾಡಲು ಉತ್ಸುಕತೆ ತೋರುತ್ತಿರುವುದು ಬಹಳ ಸಂತಸದ ಸಂಗತಿ ಎಂದರು.    ಇಂದು ಆಯೋಜಿಸಲಾಗಿರುವ ಜಿಲ್ಲಾ ಮಟ್ಟದ ಸಂಗೀತೋತ್ಸವದಲ್ಲಿ ವಿಜೇತರಾದ ಸಂಗೀತ ಪಟುಗಳು ಮುಂದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ವಿಜೇತರಾಗುವುದರ ಮೂಲಕ ತಮ್ಮ ಪೋಷಕರಿಗೂ, ಹಾಗೂ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾಸಂಸ್ಥೆಗೂ ಕೀರ್ತಿ ತರುವಂತೆ ಶುಭಹಾರೈಸಿದರು.

ಇಂದಿನ ಸಂಗೀತೋತ್ಸವ ಸಮಾರಂಭದಲ್ಲಿ ಮೈಸೂರು ಜಿಲ್ಲೆಯ ವ್ಯಾಪ್ತಿಯ ತಾಲೂಕುಗಳ 30ಕ್ಕೂ ಹೆಚ್ಚು ಸಂಗೀತ ಪಟುಗಳು ಪಾಲ್ಗೊಂಡಿದ್ದರು.

ಇಂದಿನ ಸಮಾರಂಭದಲ್ಲಿ ಎಸ್.ಡಿ.ಎಂ.ಸಿ. ಫ್ರೌಡಶಾಲೆಯ ಅಧ್ಯಕ್ಷೆ ಸಲ್ಮಾಬಾನು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ನಾಗಮ್ಮ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಪಾಂಡುರಂಗ, ಮೈಸೂರು ವಿಭಾಗದ ಕನ್ನಡ ಪ್ರಭ ಪತ್ರಿಕೆ ಮುಖ್ಯ ಸಂಪಾದಕ ಅಂಶಿ ಪ್ರಸನ್ನಕುಮಾರ್ ಹಾಗೂ ಇನ್ನಿತರ ಗಣ್ಯರು ಉಪಸ್ಧಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: