ಮೈಸೂರು

ಮಹಿಳೆಯ ಸಾಧನೆಗೆ ಪುರುಷ ಪ್ರಧಾನ ಸಮಾಜ ಪೂರಕವಾಗಿದೆ : ಪ್ರೊ.ಎಸ್.ಪಿ.ಉಮಾದೇವಿ

ಸಮಾಜದಲ್ಲಿ ಸಕಾರಾತ್ಮಕ ರೀತಿಯಲ್ಲಿ ಹೊಂದಿಕೊಂಡು ಸಾಧನೆ ಮಾಡುತ್ತಿರುವ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿರುವುದು ಅಭಿನಂದನಾರ್ಹ. ಇದು ನಿಜಕ್ಕೂ ಸ್ತ್ರೀ ಕುಲಕ್ಕೆ ಹೆಮ್ಮೆಯ ವಿಚಾರ ಎಂದು ಜೆಎಸ್ಎಸ್ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಎಸ್.ಪಿ.ಉಮಾದೇವಿ ಹೇಳಿದರು.

ಸೋಮವಾರ ಮೈಸೂರಿನ ಪತ್ರಕರ್ತ ಭವನದಲ್ಲಿ ಕನ್ನಡ ಚಳುವಳಿ ಕೇಂದ್ರ ಸಮಿತಿ ಮತ್ತು ಕನ್ನಡ ಸಾಹಿತ್ಯ ಕಲಾಕೂಟ ಇವರ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಧಕ ಮಹಿಳೆಯರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾಳೆ. ಅದಕ್ಕೆ ಪುರುಷ ಪ್ರಧಾನ ಸಮಾಜವೂ ಪೂರಕವಾಗಿದೆ. ಅಂತಹ ಸಹೃದಯಿ ಮನಸುಗಳು  ಮಹಿಳೆಯರ ಸಾಧನೆಯನ್ನು ಗುರುತಿಸಿ ಇಂತಹ ಸನ್ಮಾನ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಚಾರ ಎಂದರು.

ಸನ್ಮಾನ ಸ್ವೀಕರಿಸಿದ  ಜಿಲ್ಲಾ ಪಂಚಾಯತ್ ನ ಮಾಜಿ ಅಧ‍್ಯಕ್ಷೆ ಡಾ.ಪುಷ್ಪ ಅಮರನಾಥ್ ಮಾತನಾಡಿ, ಮಹಿಳೆ ಸಮಾಜದ ನಾನಾ ಮುಖಗಳಾಗಿ ತನ್ನ ಸೇವೆ ಸಲ್ಲಿಸುತ್ತಾ ಬಂದಿದ್ದಾಳೆ. ಅವಳ ಸಾಧನೆ ಶ್ಲಾಘನೀಯವಾದುದು. ಪ್ರತಿ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುವುದಿಲ್ಲ. ಆತನ ಜೊತೆಯಲ್ಲಿರುತ್ತಾಳೆ. ಅಂತೆಯೇ ಒಬ್ಬ ಯಶಸ್ವಿ ಮಹಿಳೆಯ ಜೊತೆ ಒಬ್ಬ ಪುರುಷ ಇರುತ್ತಾನೆ.

ಕೇವಲ ನಾಲ್ಕು ಗೋಡೆಗಳ ಮಧ್ಯೆ ಮಾತ್ರ ತನ್ನ ಬದುಕು ಎಂಬ ಮನೋಭಾವನೆ ಇಂದಿಗೂ ಕೆಲವು ಹೆಣ್ಣು ಮಕ್ಕಳಲ್ಲಿ ಇದೆ. ಅದನ್ನು ತೊಡೆದು ಹಾಕಿ ಸಾಧನೆ ಮಾಡಿದಾಗ ಮಾತ್ರ ದೇಶ ಅಭಿವೃದ್ಧಿಯ ಪಥದತ್ತ ಸಾಗಲು ಸಾಧ‍್ಯ ಎಂದರು. ಇಂದಿಗೂ ಎಷ್ಟೋ ಮಹಿಳೆಯರು ಶಿಕ್ಷಣದಿಂದ ವಂಚಿತರಾಗಿ ಉಳಿದಿದ್ದಾರೆ. ಅವರಿಗೆ ಶಿಕ್ಷಣ ಕೊಡಿಸಿ ಸಮಾಜಮುಖಿಗಳನ್ನಾಗಿ ಮಾಡುವುದು ನಮ್ಮ ಸಮಾಜ ಮತ್ತು ಸರ್ಕಾರದ ಜವಾಬ್ದಾರಿಯಾಗಿದೆ. ಹಾಗಾದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ‍್ಯವಾಗುತ್ತದೆ ಎಂದರು.

ಇದಕ್ಕೂ ಮುನ್ನ ಮಹಿಳಾ ಸಾಧಕಿಯರಾದ ಡಾ.ಪುಷ್ಪ ಅಮರನಾಥ್, ಡಾ.ಕವಿತಾ ರೈ, ನಿರ್ಮಲಾ ಮಠಪತಿ, ಮಂಗಳಾ ಮುದ್ದುಮಾದಪ್ಪ, ಡಾ.ಎ.ಪುಷ್ಪಾ ಅಯ್ಯಂಗಾರ್ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ‍್ಯಕ್ಷ ಕುರುಬೂರು ಶಾಂತಕುಮಾರ್, ಕನ್ನಡ ಚಳುವಳಿ ಕೇಂದ್ರ ಸಮಿತಿ ಅಧ‍್ಯಕ್ಷ ಮೂಗೂರು ನಂಜುಂಡಸ್ವಾಮಿ, ಕನ್ನಡ ಸಾಹಿತ್ಯ ಕಲಾ ಕೂಟದ ಅಧ‍್ಯಕ್ಷ ಎಂ.ಚಂದ್ರಶೇಖರ್, ಸಂಚಾಲಕ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು. (ಎಲ್.ಜಿ-ಎಸ್.ಎಚ್)

Leave a Reply

comments

Related Articles

error: