ಮೈಸೂರು

ಬೇಸಿಗೆಗೆ ಕಂಗೆಟ್ಟ ಜನತೆ : ಸಾಂಕ್ರಾಮಿಕ ರೋಗದ ಭೀತಿ; ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳ ಸಲಹೆ

ಮರಗಿಡಗಳಿಂದ ಎಲೆಗಳು ಉದುರಿ, ನವಿರಾಗಿ ಚಿಗುರಿಕೊಂಡು ಬೆಚ್ಚನೆಯ ಪ್ರಭೆ ಹೊರಡಿಸುವ ಕಾಲ. ಮಾಗಿಯ ಚಳಿಗೆ ಮುದುಡಿದ್ದ ಮನಸು ಇದೀಗ ಬೆಚ್ಚನೆಯ ವಾತಾವರಣಕ್ಕೆ ತೆರೆದುಕೊಳ್ಳಲಾರಂಬಿಸಿದೆ. ಆದರೆ ಈ ಬಾರಿಯ ಬೇಸಿಗೆ ಅಂತಹ ಸಂಭ್ರಮವನ್ನೇನೂ ನೀಡುತ್ತಿಲ್ಲ. ಆರಂಭದಲ್ಲಿಯೇ ಬಿಸಿಲಿನ ತಾಪ ಹೆಚ್ಚಾಗಿದ್ದು, ಮನೆಯಿಂದ ಹೊರಬರುವುದೇ ಕಷ್ಟವೇನಿಸತೊಡಗಿದೆ.

ಎಪ್ರಿಲ್-ಮೇನಲ್ಲಿ ಕಾಣಿಸಿಕೊಳ್ಳಬೇಕಾಗಿದ್ದ ಬಿರು ಬೇಸಿಗೆ ಈ ಬಾರಿ ಫೆಬ್ರವರಿ ತಿಂಗಳಿನಲ್ಲೇ ಕಾಣಿಸಿಕೊಂಡು ಇನ್ನಿಲ್ಲದ ರೋಗಗಳನ್ನು ಹುಟ್ಟು ಹಾಕುತ್ತಿದೆ. ಮೊದಲೇ ನೀರಿಲ್ಲದ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು ಎಲ್ಲರೂ ಬೀದಿ ಬದಿ ದೊರಕುವ ತಂಪು ಪಾನೀಯಗಳು, ಎಳನೀರುಗಳು, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಎಷ್ಟೇ ದಣಿವಾರಿಸಿ, ಬಾಯಾರಿಕೆ ತಣಿಸಿಕೊಳ್ಳಲೆತ್ನಿಸಿದರೂ ಸಾಧ್ಯವಾಗುತ್ತಿಲ್ಲ. ವಾತಾವರಣದಲ್ಲಿ ಧೂಳು ಸಹ ಸೇರಿಕೊಂಡಿರುವುದರಿಂದ ಹಲವು ರೋಗಗಳು ನಮ್ಮನ್ನರಸಿ ಬರುತ್ತಿವೆ.

ಮೈಸೂರು ಜಿಲ್ಲೆ ಗಿಡ ಮರಗಳಿಂದ ಕೂಡಿದ್ದು ತಂಪಿನ ತಾಣವಾಗಿತ್ತು. ಆದರೆ ಈ ಬಾರಿ ಬಯಲು ಸೀಮೆಯಂತೆ ಕಾಣಿಸುತ್ತಿದ್ದು, ಬಿರುಬೇಸಿಗೆಗೆ ಜನತೆ ಕಂಗೆಡುವಂತಾಗಿದೆ.  ಈ ಕುರಿತು ಯಾವ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆನ್ನುವ ಕುರಿತು ಸಿಟಿಟುಡೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಸವರಾಜು ಅವರನ್ನು ಮಾತನಾಡಿಸಿದಾಗ “ಬೇಸಿಗೆ ಆರಂಭವಾಗಿರುವುದರಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯಾಧಿಕಾರಿಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಅಂಗನವಾಡಿಗಳಿಗೆ, ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. ಬಿಸಿಲು ಹೆಚ್ಚಿರುವುದರಿಂದ ಹಲವು ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಅವುಗಳಿಂದ ದೂರಾಗಲು ಮುನ್ನೆಚ್ಚರಿಕೆ ಅವಶ್ಯಕ. ರಸ್ತೆ ಬದಿಯ ತಿಂಡಿ ತಿನಿಸುಗಳನ್ನು ತಿನ್ನುವುದಾಗಲಿ, ಅಶುಚಿತ್ವದಿಂದ ಇರುವುದಾಗಲಿ ಮಾಡಬಾರದು. ಕಾಯಿಸಿ ಆರಿಸಿದ ನೀರನ್ನು ಕುಡಿಯುವುದು ಒಳ್ಳೆಯದು. ಅತಿಯಾದ ಬಿಸಿಲಿನಿಂದ ವಾಂತಿ, ಬೇಧಿಯಾಗುವುದರಿಂದ ಓಆರ್‍ಎಸ್ ದ್ರಾವಣವನ್ನು ಶೇಖರಿಸಿಟ್ಟುಕೊಳ್ಳಲಾಗಿದೆ. ಆಶಾಕಾರ್ಯರಿಂದ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ಮಾಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 289 ಹೆಚ್1ಎನ್1 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು ಅದರಲ್ಲಿ 118 ಪಾಸಿಟಿವ್ ಬಂದಿದ್ದು 7ಮಂದಿ ಮೃತಪಟ್ಟಿದ್ದಾರೆ. ಉಳಿದವರು ಚೇತರಿಸಿಕೊಂಡಿದ್ದು, ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಾಲರಾ, ದಡಾರ ಪ್ರಕರಣಗಳು ವರದಿಯಾಗಿಲ್ಲ ಎಂದರು.

ಇನ್ನು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಮಾತನಾಡಿ ಬೇಸಿಗೆ ಆರಂಭವಾಗಿದ್ದು ಪಾಲಿಕೆ ವತಿಯಿಂದ ಸಕಲ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಸ್ತೆಬದಿಯ ವ್ಯಾಪಾರಿಗಳಿಗೆ ಶುಚಿತ್ವ ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಲ್ಲಂಗಡಿ, ಸವತೇಕಾಯಿ ಸೇರಿದಂತೆ ಇನ್ನಿತರೆ ವ್ಯಾಪಾರಿಗಳಿಗೆ ಗ್ಲಾಸ್ ಬಾಕ್ಸ್‍ನಲ್ಲಿಟ್ಟು ವ್ಯಾಪಾರ ಮಾಡುವಂತೆ ತಿಳಿಸಲಾಗಿದೆ. ಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಬಿಸಿ ನೀರು ನೀಡುವಂತೆ ಸೂಚಿಸಲಾಗಿದೆ. ಎಳನೀರು ವ್ಯಾಪಾರಿಗಳಿಗೆ ಸಿಪ್ಪೆಗಳನ್ನು ಆಯಾ ದಿನವೇ ತುಂಬಿಕೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೆ ರಸ್ತೆಬದಿಯ ಪಾಸ್ಟ್‍ಫುಡ್, ಚಾಟ್ಸ್ ಅಂಗಡಿಗಳನ್ನು ಬೇಸಿಗೆ ಮುಗಿಯುವವರೆಗೆ ತೆರವುಗೊಳಿಸಲು ಚಿಂತನೆ ನಡೆಸಲಾಗಿದೆ. ಅತಿಯಾದ ಬಿಸಿಲಿರುವುದರಿಂದ ಸಾರ್ವಜನಿಕರು ಹೆಚ್ಚಾಗಿ ದ್ರವಪದಾರ್ಥಗಳನ್ನು ಸೇವಿಸಬೇಕು. ದಿನನಿತ್ಯ ಸುಮಾರು 3ರಿಂದ 4ಲೀಟರ್ ನೀರು ಕುಡಿಯಬೇಕು. ಗಟ್ಟಿಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬಾರದು. ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೂ ಯಾವುದೇ ಸಮಸ್ಯೆ ಕಂಡುಬಂದಿಲ್ಲ ಎಂದಿದ್ದಾರೆ.

(ಬಿ.ಎಂ-ಎಸ್.ಎಚ್)

 

Leave a Reply

comments

Related Articles

error: