ಕ್ರೀಡೆ

ಮಹಿಳಾ ಟಿ20 ವಿಶ್ವಕಪ್ ಟೂರ್ನಿ: ಸೆಮಿಫೈನಲ್ ಪ್ರವೇಶಿಸಿದ ಭಾರತದ ವನಿತೆಯರು

ಮೆಲ್ಬೋರ್ನ್‌,ಫೆ.27-ನ್ಯೂಜಿಲೆಂಡ್ ಮಹಿಳಾ ತಂಡದ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭಾರತ ತಂಡ 4 ರನ್‌ಗಳ ಗೆಲುವು ಸಾಧಿಸಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ತಲುಪಿದೆ.

ಇಲ್ಲಿನ ಜಂಕ್ಷನ್‌ ಓವಲ್‌ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ 20 ಓವರ್‌ಗಳಲ್ಲ 8 ವಿಕೆಟ್‌ ಕಳೆದುಕೊಂಡು 133 ರನ್‌ ಗಳಿಸಿತು. ಬಳಿಕ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 129 ರನ್ ಗಳಿಸಲಷ್ಟೇ ಶಕ್ತವಾಯಿತು.

ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್‌ಗೆ 5 ರನ್‌ ಗಳಿಸುವ ಅಗತ್ಯವಿತ್ತು. ಆದರೆ ಶಿಖಾ ಪಾಂಡೆ ಬೌಲಿಂಗ್‌ನಲ್ಲಿ 1 ರನ್‌ ಗಳಿಸಲಷ್ಟೇ ಸಾಧ್ಯವಾಗಿ ನಿರಾಸೆ ಅನುಭವಿಸಿತು. ಕಿವೀಸ್‌ ಪರ ಆಲ್‌ರೌಂಡರ್‌ ಎಮಿಲಿಯಾ ಕೆರ್‌, ಸ್ಫೋಟಕ ಬ್ಯಾಟಿಂಗ್‌ ನಡೆಸಿ 19 ಎಸೆತಗಳಲ್ಲಿ 6 ಪೋರ್‌ಗಳೊಂದಿಗೆ 34* ರನ್‌ ಗಳಿಸಿದರಾದರೂ ತಂಡವನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. 19ನೇ ಓವರ್‌ನಲ್ಲಿ ಪೂನವ್‌ ಯಾದವ್‌ ಎದುರು 18 ರನ್‌ ಚಚ್ಚಿದ್ದ ಕೆರ್‌, ಕೊನೆಯ 2 ಎಸೆತಗಳಲ್ಲಿ 9 ರನ್‌ ಬೇಕಿದ್ದ ಸಂದರ್ಭದಲ್ಲಿ 5 ರನ್‌ ಗಳಿಸಲಷ್ಟೇ ಶಕ್ತರಾದರು.

ಮತ್ತೊಮ್ಮೆ 16 ವರ್ಷದ ಯುವ ಪ್ರತಿಭೆ ಶಫಾಲಿ ವರ್ಮಾ 46 ರನ್‌ ಸಿಡಿಸಿ ಗರಿಷ್ಠ ರನ್‌ ಸ್ಕೋರರ್‌ ಎನಿಸಿದರು. ಈ ಮೂಲಕ ಸತತ ಎರಡನೇ ಬಾರಿ ಪಂದ್ಯಶ್ರೇಷ್ಠ ಗೌರವ ತಮ್ಮದಾಗಿಸಿಕೊಂಡರು. ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಇತಿಹಾಸದಲ್ಲಿ ಪಂದ್ಯಶ್ರೇಷ್ಠ ಗೌರವ ಪಡೆದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ದಾಖಲೆ ಶಫಾಲಿ ಹೆಸರಲ್ಲಿದೆ.

ಇದರೊಂದಿಗೆ ‘ಎ’ ಗುಂಪಿನಲ್ಲಿ ಭಾರತ ತಂಡ ಈವರೆಗೆ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯ ಅಗ್ರಸ್ಥಾನಿಯಾಗಿ ಸೆಮಿಫೈನಲ್‌ಗೆ ಕಾಲಿಟ್ಟ ಮೊದಲ ತಂಡ ಎನಿಸಿಕೊಂಡಿದೆ. ಫೆ.29ರಂದು ಭಾರತ ತಂಡ ತನ್ನ 4ನೇ ಹಾಗೂ ಅಂತಿಮ ಲೀಗ್‌ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪೈಪೋಟಿ ನಡೆಸಲಿದೆ.

ಸಂಕ್ಷಿಪ್ತ ಸ್ಕೋರ್‌: ಭಾರತ ಮಹಿಳಾ ತಂಡ: 20 ಓವರ್ಗಳಲ್ಲಿ 8 ವಿಕೆಟ್ಗೆ 133 (ಶಫಾಲಿ ವರ್ಮಾ 46, ತಾನಿಯಾ ಭಾಟಿಯಾ 23, ರಾಧಾ ಯಾದವ್‌ 14; ರೋಸ್ಮೆರಿ ಮೇರ್‌ 27ಕ್ಕೆ 2, ಎಮಿಲಿಯಾ ಕೆರ್‌ 21ಕ್ಕೆ 2).
ನ್ಯೂಜಿಲೆಂಡ್ಮಹಿಳಾ ತಂಡ: ನ್ಯೂಜಿಲೆಂಡ್‌ 20 ಓವರ್ಗಳಲ್ಲಿ 129/6 (ಮ್ಯಾಡಿ ಗ್ರೀನ್‌ 24, ಕ್ಯಾಟಿ ಮಾರ್ಟಿನ್‌ 25, ಎಮಿಲಿಯಾ ಕೆರ್‌ ಔಟಾಗದೆ 34, ಹೇಲೀ ಜೆನ್ಸೆನ್‌ ಔಟಾಗದೆ 11; ಶಿಖಾ ಪಾಂಡೆ 21ಕ್ಕೆ 1, ರಾಜೇಶ್ವರಿ ಗಾಯಕ್ವಾಡ್‌ 22ಕ್ಕೆ 1, ದೀಪ್ತಿ ಶರ್ಮಾ 27ಕ್ಕೆ 1, ರಾಧಾ ಯಾದವ್‌ 25ಕ್ಕೆ 1, ಪೂನಮ್‌ ಯಾದವ್‌ 32ಕ್ಕೆ 1). (ಎಂ.ಎನ್)

Leave a Reply

comments

Related Articles

error: