ದೇಶ

‘ಇಂಡಿಯನ್ 2’ ಸೆಟ್ ನಲ್ಲಿ ದುರಂತ: ಲೈಕಾ ಪ್ರೊಡಕ್ಷನ್ಸ್ ನಿಂದ ಕಮಲ್ ಹಾಸನ್ ಗೆ ಪತ್ರ

ಚೆನ್ನೈ,ಫೆ.27-‘ಇಂಡಿಯನ್ 2’ ಶೂಟಿಂಗ್ ಸೆಟ್‌ನಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಲೈಕಾ ಪ್ರೊಡಕ್ಷನ್ಸ್ ಗೆ ನಟ ಕಮಲ್ ಹಾಸನ್ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿ ಲೈಕಾ ಸಂಸ್ಥೆ ಕಮಲ್‌ಗೆ ಟ್ವಿಟರ್‌ನಲ್ಲಿ ಬಹಿರಂಗ ಪತ್ರ ಬರೆದಿದೆ.

ಶೂಟಿಂಗ್ ಸಮಯದಲ್ಲಿ ನಡೆದ ಕ್ರೇನ್ ದುರಂತ ದುರದೃಷ್ಟಕರ ಸಂಗತಿ. ಸಂತ್ರಸ್ತ ಕುಟುಂಬಗಳೊಂದಿಗೆ ಸಂಸ್ಥೆ ನಿರಂತರ ಸಂಪರ್ಕದಲ್ಲಿದೆ. ಮೃತರ ಕುಟುಂಬಕ್ಕೆ 2 ಕೋಟಿ ರೂ. ಆರ್ಥಿಕ ಸಹಾಯ ಘೋಷಿಸಿದ್ದೇವೆ. ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಫೆಬ್ರವರಿ 22ಕ್ಕೂ ಮೊದಲೇ ನಾವು ಈ ಕ್ರಮಗಳನ್ನೆಲ್ಲಾ ಕೈಕೊಂಡಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದೆ.

ಆದರೆ ಪತ್ರದಲ್ಲಿನ ಅಂಶಗಳು ನಿಮ್ಮ ಗಮನಕ್ಕೆ ಬಾರದೆ ಇದ್ದ ಕಾರಣಕ್ಕೇ ನೀವು ನಮಗೆ ಪತ್ರ ಬರೆದಿದ್ದೀರಿ ಎಂದು ಭಾವಿಸುತ್ತೇವೆ. ಚಿತ್ರೀಕರಣ ಸಂದರ್ಭದಲ್ಲೂ ಎಲ್ಲ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದೆವು. ದುರಂತ ಸಮಯದಲ್ಲಿ ನೀವೂ ಸಹ ಅಲ್ಲೇ ಇದ್ದಿರಿ, ಎಲ್ಲವೂ ನಿಮ್ಮ ನಿಯಂತ್ರಣದಲ್ಲೂ ಇತ್ತು ಎಂಬುದನ್ನು ವಿಶೇಷವಾಗಿ ನೆನಪಿಸಬೇಕಾದ ಅಗತ್ಯವಿಲ್ಲ. ಪ್ರೊಡಕ್ಷನ್ ವಿಮೆ ಜೊತೆಗೆ ವೈಯಕ್ತಿಕ ವಿಮೆ ಸಕಾಲದಲ್ಲಿ ಸಿಗುವಂತೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡುವುದರ ಜೊತೆಗೆ ಅವರ ಜೊತೆಗೆ ಇರಬೇಕೆಂದು ಆ ದೇವರನ್ನು ಪ್ರಾರ್ಥಿಸುತ್ತಿದ್ದೇವೆ. ನೀವು ಬಯಸಿದ್ದನ್ನೆಲ್ಲಾ ನಾವು ಮೊದಲೇ ಮಾಡಿದ್ದೇವೆ. ಸಿನಿಮಾ ಶೂಟಿಂಗ್ ಮತ್ತೆ ಪ್ರಾರಂಭಿಸಿದರೆ ಚೆನ್ನಾಗಿರುತ್ತದೆ ಅಂತ ಭಾವಿಸಿದ್ದೇವೆ ಎಂದು ಲೈಕಾ ಸಂಸ್ಥೆ ತಿಳಿಸಿದೆ.

ದುರಂತಕ್ಕೆ ಸಂಬಂಧಿಸಿದಂತೆ ಲೈಕಾ ಪ್ರೊಡಕ್ಷನ್ಸ್ ಗೆ ಬಹಿರಂಗ ಪತ್ರ ಬರೆದಿದ್ದ ಕಮಲ್ ಹಾಸನ್ ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಬೇಕು, ಸುರಕ್ಷತೆಗೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ಅಂಗೀಕರಿಸಿದರೆ ಮಾತ್ರ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದರು. ಇದಕ್ಕೆ ಸಂಬಂಧಿಸಿದಂತೆ ಲೈಕಾ ಪ್ರೊಡಕ್ಷನ್ಸ್ ಪತ್ರ ಬರೆದಿದೆ.

ಚೆನ್ನೈನ ಇವಿಸಿ ಸ್ಟುಡಿಯೋದಲ್ಲಿ ಇಂಡಿಯನ್ 2 ಚಿತ್ರೀಕರಣದ ವೇಳೆ ಲೈಟಿಂಗ್ ವ್ಯವಸ್ಥೆ ಮಾಡುವಾಗ 150 ಅಡಿ ಎತ್ತರದಿಂದ ಕ್ರೇನ್ ಬಿದ್ದು ನಿರ್ದೇಶಕ ಶಂಕರ್ ಆಪ್ತ ಸಹಾಯಕ ಮಧು (29), ಸಹಾಯಕ ನಿರ್ದೇಶಕ ಸಾಯಿಕೃಷ್ಣ (34), ಸಹಾಯಕ ಚಂದ್ರನ್ ಸ್ಥಳದಲ್ಲೇ ಮೃತಟ್ಟಿದ್ದರು. (ಎಂ.ಎನ್)

Leave a Reply

comments

Related Articles

error: