ಕ್ರೀಡೆ

ಐಪಿಎಲ್ ಟೂರ್ನಿ: ಡೇವಿಡ್‌ ವಾರ್ನರ್‌ ಸನ್ ರೈಸರ್ಸ್ ಹೈದರಾಬಾದ್ ತಂಡದ ಕ್ಯಾಪ್ಟನ್  

ನವದೆಹಲಿ,ಫೆ.27-ಈ ಬಾರಿಯ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಮುನ್ನಡೆಸಲಿದ್ದಾರೆ.

ಈ ವಿಚಾರವನ್ನು ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ತನ್ನ ಅಧಿಕೃತ ಟ್ವಿಟರ್‌ ನಲ್ಲಿ ಟ್ವೀಟ್ ಮಾಡಿದೆ. ಕೇನ್‌ ವಿಲಿಯಮ್ಸನ್‌ ಮತ್ತು ಭುವನೇಶ್ವರ್‌ ಕುಮಾರ್‌ಗೆ ನಾಯಕತ್ವದಿಂದ ಮುಕ್ತಿ ನೀಡಿ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ಗೆ ಮರಳಿ ತಂಡದ ಜವಾಬ್ದಾರಿ ವಹಿಸಿದೆ.

ಇದರೊಂದಿಗೆ ಸನ್‌ರೈಸರ್ಸ್‌ ತಂಡ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಮರಳಿ ನಾಯಕತ್ವ ಪಡೆದಿರುವ ಬಗ್ಗೆ ಡೇವಿಡ್ ವಾರ್ನರ್‌ ಮಾತನಾಡಿದ್ದಾರೆ. ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಮರಳಿ ತಂಡದ ನಾಯಕತ್ವ ಪಡೆದಿರುವುದಕ್ಕೆ ರೋಮಾಂಚನವಾಗಿದೆ. ಈ ಅವಕಾಶ ನೀಡಿರುವುದಕ್ಕೆ ನಾನು ಧನ್ಯ. ಕಳೆದ ಬಾರಿ ತಂಡವನ್ನು ಮುನ್ನಡೆಸಿರುವ ಕೇನ್‌ ವಿಲಿಯಮ್ಸನ್‌ ಮತ್ತು ಭುವನೇಶ್ವರ್‌ ಕುಮಾರ್‌ಗೆ ಧನ್ಯವಾದಗಳು. ಇದೀಗ ತಂಡ ಪ್ರಶಸ್ತಿ ಗೆಲ್ಲುವಂತೆ ಮಾಡಲು ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡಲಿದ್ದೇನೆ ಎಂದಿದ್ದಾರೆ. ಡೇವಿಡ್ ವಾರ್ನರ್‌ ಸದ್ಯ ಟಿ20 ಸರಣಿ ಸಲುವಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ.

ಕಳೆದ ಎರಡು ಆವೃತ್ತಿಗಳಲ್ಲಿ ನ್ಯೂಜಿಲೆಂಡ್‌ನ ತಾರೆ ಕೇನ್‌ ವಿಲಿಯಮ್ಸನ್‌ ತಂಡವನ್ನು ಮುನ್ನಡೆಸಿದ್ದರು. ಕೆಲ ಪಂದ್ಯಗಳಲ್ಲಿ ಭುವನೇಶ್ವರ್‌ ಕುಮಾರ್‌ ಕೂಡ ನಾಯಕತ್ವ ವಹಿಸಿದ್ದರು. 2019ರ ಆವೃತ್ತಿಯಲ್ಲಿ ವಿಲಿಯಮ್ಸನ್‌ ತಂಡದ ನಾಯಕತ್ವ ಪಡೆದಿದ್ದರು. ಆದರೆ ಗಾಯದ ಸಮಸ್ಯೆ ಕಾರಣ ಅವರಿಗೆ ಕೆಲ ಪಂದ್ಯಗಳಲ್ಲಿ ಆಡದೇ ಇದ್ದ ಕಾರಣಕ್ಕೆ ಭುವನೇಶ್ವರ್‌ ಕುಮಾರ್‌ ತಂಡದ ಜವಾಬ್ದಾರಿ ಹೊತ್ತಿದ್ದರು.

2013ರ ಆವೃತ್ತಿಯಲ್ಲಿ ಐಪಿಎಲ್‌ಗೆ ಕಾಲಿಟ್ಟ ಸನ್‌ರೈಸರ್ಸ್‌ ತಂಡ, 2016ರಲ್ಲಿ ತನ್ನ ಏಕೈಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು 2017 ಮತ್ತು 2019ರಲ್ಲಿ ಪ್ಲೇಆಫ್ಸ್‌ಗೆ ತಲುಪಿದ ಸಾಧನೆ ಮಾಡಿರುವ ಹೈದರಾಬಾದ್‌ ತಂಡ 2018ರಲ್ಲಿ ಕೇನ್‌ ವಿಲಿಯಮ್ಸನ್‌ ಸಾರಥ್ಯದಲ್ಲಿ ರನ್ನರ್ಸ್ಅಪ್‌ ಸ್ಥಾನ ಪಡೆದಿತ್ತು. (ಎಂ.ಎನ್)

 

Leave a Reply

comments

Related Articles

error: