ಮೈಸೂರು

ಮೈಸೂರು ಜಿಲ್ಲೆಯಲ್ಲಿ 1899 ಶಂಕಿತ ಡೆಂಗ್ಯೂ ಪ್ರಕರಣ ಪತ್ತೆ

ಖಾಸಗಿ ಆಸ್ಪತ್ರೆಯೊಂದಿಗೆ 108 ವಾಹನ ಚಾಲಕರು ಶಾಮೀಲಾಗಿದ್ದು, ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ತರದೇ ಖಾಸಗೀ ಆಸ್ಪತ್ರೆಗೆ ಕೊಂಡೊಯ್ಯಲಾಗುತ್ತಿದೆ ಎನ್ನುವ ವಿಷಯ ಜಿಲ್ಲಾಪಂಚಾಯತ್ ಕೆಡಿಪಿ ಸಭೆಯಲ್ಲಿ ಕೇಳಿ ಬಂತು.

ಜಿಲ್ಲಾಪಂಚಾಯತ್  ಕಚೇರಿಯಲ್ಲಿ ಜಿ.ಪಂ ಅಧ್ಯಕ್ಷೆ ನಯೀಮಾ ಸುಲ್ತಾನ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ 108 ತುರ್ತು ಚಿಕಿತ್ಸಾವಾಹನ ವಿಷಯ ಭಾರೀ ಚರ್ಚೆಗೆ ಗ್ರಾಸವಾಯಿತು.

ಬಹುತೇಕ ಸಂದರ್ಭಗಳಲ್ಲಿ ಚಾಲಕರು ಖಾಸಗೀ ಆಸ್ಪತ್ರೆಗೆ ಸೇರಿಸುತ್ತಿರುವುದರಿಂದ ರೋಗಿಗಳು ಆರ್ಥಿಕ ಸಂಕಷ್ಟ ಅನುಭವಿಸಬೇಕಿದೆ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಜಿಪಂ ಸಿಇಒ ಶಿವಶಂಕರ್ ಈ ವಿಷಯ ಕುರಿತಂತೆ ಅಂಕಿ-ಅಂಶಗಳನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ 1899 ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ರಕ್ತ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 454 ಪಾಸಿಟಿವ್ ಎಂಬ ವರದಿ ಬಂದಿದೆ. ನಗರದಲ್ಲಿ 381, ಗ್ರಾಮೀಣ ಪ್ರದೇಶದಲ್ಲಿ 173ಪ್ರಕರಣಗಳು ಪತ್ತೆಯಾಗಿವೆ. 124 ಚಿಕುನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ 69, ಗ್ರಾಮೀಣ 55ಪ್ರಕರಣಗಳು ಪತ್ತೆಯಾಗಿವೆ. ಯಾವುದೇ ಸಾವು ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿಗಳ ಪರವಾಗಿ ಆಗಮಿಸಿದ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಅಕ್ಟೋಬರ್ ಮೊದಲ ವಾರದಲ್ಲೇ ಪಡೆದುಕೊಳ್ಳಬೇಕು, ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಪಡದುಕೊಂಡು ಅಕ್ಟೋಬರ್ 2ರೊಳಗೆ ಜಿಲ್ಲಾಪಂಚಾಯತ್ ಗೆ ಸಲ್ಲಿಸಬೇಕು ಎಂದು ಸಿಇಓ ಶಿವಶಂಕರ್ ತಿಳಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ನಟರಾಜು, ಜಿ.ಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷಬೀರಿ ಹುಂಡಿ ಬಸವಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Tags

Related Articles

error: