ಕ್ರೀಡೆ

ಕೃಷಿ ಮಾಡಲು ಮುಂದಾದ ಎಂ.ಎಸ್.ಧೋನಿ

ನವದೆಹಲಿ,ಫೆ.28-ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್ ನಿಂದ ದೂರವುಳಿದಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಇದೀಗ ಕೃಷಿ ಮಾಡಲು ಮುಂದಾಗಿದ್ದಾರೆ.

ರಾಂಚಿಯಲ್ಲಿರುವ ತಮ್ಮ ಹೊಲದಲ್ಲಿ ಸಾವಯವ ಕೃಷಿ ಮಾಡಲು ಮುಂದಾಗಿದ್ದಾರೆ. ತಮ್ಮ ಹೊಲದಲ್ಲಿ ಸಾವಯವ ರೀತಿಯಲ್ಲಿ ಕಲ್ಲಂಗಡಿ ಬೆಳೆಯುವುದಾಗಿ ಹೇಳಿದ್ದು, ಮುಂದಿನ 20 ದಿನಗಳ ಬಳಿಕ ಪಪ್ಪಾಯ ಕೂಡ ಬೆಳೆಯುವುದಾಗಿ ತಮ್ಮ ಫೇಸ್‌ಬುಕ್‌ ಪೋಸ್ಟ್‌ ಮೂಲಕ ತಿಳಿಸಿದ್ದಾರೆ.

ಹೊಲದಲ್ಲಿ ಕೆಲಸ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ಧೋನಿ, ಸಹಾಯಕರೊಟ್ಟಿಗೆ ತಾವೂ ಕೂಡ ಕಲ್ಲಂಗಡಿ ಬೀಜಗಳನ್ನು ಹಾಕುತ್ತಿದ್ದಾರೆ. ಇದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿದೆ.

ಕಳೆದ ವರ್ಷ ಜುಲೈನಲ್ಲಿ ನಡೆದ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಬಳಿಕ ಧೋನಿ ಅನಿರ್ಧಿಷ್ಟಾವಧಿಯ ಕಾಲ ವಿಶ್ರಾಂತಿ ಮೊರೆ ಹೋದರು. ಈ ವೇಳೆ ಯೋಧನಾಗಿ ಗಡಿಯಲ್ಲಿ ಗಸ್ತು ತಿರುಗಿದರು. ಕುಟುಂಬದೊಂದಿಗೆ ಪ್ರವಾಸ, ಸ್ನೇಹಿತರೊಡನೆ ಗಲ್ಲಿ ಕ್ರಿಕೆಟ್ ಹೀಗೆ ಸಮಯ ಕಳೆಯುತ್ತಿದ್ದಾರೆ.

ಈ ನಡುವೆ ಧೋನಿ ನಿವೃತ್ತಿಯ ಕುರಿತಾಗಿಯೂ ಸಾಕಷ್ಟು ಚರ್ಚೆಗಳಾಗುತ್ತಿದೆ. ಆದರೆ ಧೋನಿ ಮಾತ್ರ ನಿವೃತ್ತಿ ಕುರಿತು ಎಲ್ಲಿಯೂ ಮಾತನಾಡಿಲ್ಲ. ಧೋನಿ ಐಪಿಎಲ್ ಟೂರ್ನಿಯಲ್ಲಿ ಕಮ್‌ ಬ್ಯಾಕ್‌ ಮಾಡುವ ನಿರೀಕ್ಷೆಯಿದೆ.

ಐಪಿಎಲ್‌ ಟೂರ್ನಿಯ ಬಳಿಕ ಧೋನಿ ಭವಿಷ್ಯ ನಿರ್ಧಾರವಾಗಲಿದೆ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್‌ ರವಿ ಶಾಸ್ತ್ರಿ ಹೇಳಿದ್ದರು. 13ನೇ ಆವೃತ್ತಿಯ ಐಪಿಎಲ್‌ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದು, ಉತ್ತಮ ಲಯ ಕಂಡುಕೊಂಡರೆ ಇದೇ ವರ್ಷ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಪ್ರಕಟಿಸಲಾಗುವ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಧೋನಿ ಕಮ್‌ಬ್ಯಾಕ್‌ ಮಾಡುವುದು ಕಷ್ಟವಿದ್ದು, ಈ ಮಾದರಿಯಲ್ಲಿ ಅವರ ವೃತ್ತಿಬದುಕು ಬಹುತೇಕ ಅಂತ್ಯಗೊಂಡಿದೆ ಎಂದು ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದರು. ಕೇವಲ ಟಿ20ಯಲ್ಲಿ ಮಾತ್ರವೇ ಅವರಿಂದ ಮುಂದುವರಿಯಲು ಸಾಧ್ಯ ಎಂದಿದ್ದರು.

ಐಪಿಎಲ್ ಟೂರ್ನಿಯು ಮಾರ್ಚ್‌ 29ರಂದು ಮುಂಬೈನಲ್ಲಿ ಶುರುವಾಗಲಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಮುಂಬೈ ಇಂಡಿಯನ್ಸ್‌ ಮತ್ತು ಕಳೆದ ಬಾರಿಯ ರನ್ನರ್ಸ್‌ಅಪ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಮೂಲಕ ಧೋನಿ ಕ್ರಿಕೆಟ್‌ ಅಂಗಣಕ್ಕೆ ಮರಳಿ ಕಾಲಿಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. (ಎಂ.ಎನ್)

 

Leave a Reply

comments

Related Articles

error: