ಕ್ರೀಡೆ

ಟೀಂ ಇಂಡಿಯಾಗೆ ಮತ್ತೊಂದು ಆಘಾತ: ಗಾಯದ ಸಮಸ್ಯೆಗೆ ತುತ್ತಾದ ಇಶಾಂತ್ ಶರ್ಮಾ

ಕ್ರೈಸ್ಟ್‌ ಚರ್ಚ್‌,ಫೆ.28-ಟೀಂ ಇಂಡಿಯಾದ ಓಪನರ್‌ ಪೃಥ್ವಿ ಶಾ ಗಾಯದ ಸಮಸ್ಯೆಯಿಂದಾಗಿ ಎರಡನೇ ಟೆಸ್ಟ್ ಪಂದ್ಯ ಆಡುವುದು ಅನುಮಾನವಾಗಿರುವಾಗ ಟೀಂ ಇಂಡಿಯಾಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.

ವೇಗದ ಬೌಲರ್ ಇಶಾಂತ್ ಶರ್ಮಾ ಪಾದದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇಲ್ಲಿನ ಹ್ಯಾಗ್ಲೀ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದೆ.

ಪ್ರಥಮ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ ಉರುಳಿಸಿ ತಂಡಕ್ಕೆ ಆಸರೆಯಾಗಿದ್ದ ಇಶಾಂತ್‌ ಶರ್ಮಾ ಗಾಯಕ್ಕೆ ತುತ್ತಾಗಿರುವುದು ಟೀಂ ಇಂಡಿಯಾಗೆ ಭಾರಿ ಆಘಾತ ತಂದೊಡ್ಡಿದೆ.

ಕ್ರಿಕೆಟ್‌ ಪರಿಣತರಾದ ವಿಮಲ್‌ ಕುಮಾರ್‌ ಅವರ ಪ್ರಕಾರ, ಪಾದದ ಗಾಯದ ಸಮಸ್ಯೆ ಕಾರಣ ಇಶಾಂತ್‌ ಶುಕ್ರವಾರ ಭಾರತ ತಂಡದ ನೆಟ್ಸ್‌ ಅಭ್ಯಾಸದಲ್ಲಿ ಬೌಲಿಂಗ್ ನಡೆಸಲಿಲ್ಲ. ಕಳೆದ ತಿಂಗಳು ರಣಜಿ ಟ್ರೋಫಿ ಟೂರ್ನಿಯ ಪಂದ್ಯದ ವೇಳೆ ಇಶಾಂತ್‌ ಈ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಈಗ ಮತ್ತದೇ ಸಮಸ್ಯೆ ಅವರನ್ನು ಕಾಡಲಾರಂಭಿಸಿದೆ.

ಇಶಾಂತ್‌ ಗಾಯಗೊಂಡು ಹೊರಗುಳಿಯುವುದೇ ಆದರೆ ಭಾರತ ತಂಡಕ್ಕೆ ಬಹುದೊಡ್ಡ ಪೆಟ್ಟಾಗಲಿದೆ. ಅವರ ಸ್ಥಾನದಲ್ಲಿ ಯುವ ವೇಗಿ ನವದೀಪ್‌ ಸೈನಿಗೆ ಭಾರತ ಟೆಸ್ಟ್‌ ತಂಡಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಇನ್ನು ಅನುಭವದ ಮೊರೆ ಹೋದಲ್ಲಿ ವಿದರ್ಭ ಎಕ್ಸ್‌ಪ್ರೆಸ್‌ ಉಮೇಶ್‌ ಯಾದವ್‌ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವೆಲ್ಲಿಂಗ್ಟನ್‌ನ ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್‌ಗಳ ಹೀನಾಯ ಸೋಲುಂಡು ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸೋಲಿನ ಆಘಾತಕ್ಕೊಳಗಾಯಿತು. 2 ಪಂದ್ಯಗಳ ಸರಣಿಯಲ್ಲಿ ಕಿವೀಸ್‌ ಪಡೆ 1-0 ಅಂತರದ ಮುನ್ನಡೆಯಲ್ಲಿದ್ದು, ಸಮಬಲ ಸಾಧಿಸಲು ವಿರಾಟ್ ಕೊಹ್ಲಿ ಬಳಗ 2ನೇ ಟೆಸ್ಟ್‌ನಲ್ಲಿ ಗೆಲ್ಲಬೇಕಿದೆ. ದ್ವಿತೀಯ ಟೆಸ್ಟ್‌ ಪಂದ್ಯ ಹ್ಯಾಗ್ಲೀ ಓವಲ್‌ ಕ್ರೀಡಾಂಗಣದಲ್ಲಿ ಫೆ.29 ನಾಳೆ ಪ್ರಾರಂಭವಾಗಲಿದೆ. (ಎಂ.ಎನ್)

Leave a Reply

comments

Related Articles

error: