ಮೈಸೂರು

ಶತಮಾನೋತ್ಸವ ಘಟಿಕೋತ್ಸವ ಲಾಂಛನ ಬಿಡುಗಡೆ ಮಾಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್ 

ಮೈಸೂರು,ಫೆ.28:- ಮೈಸೂರು ವಿಶ್ವವಿದ್ಯಾನಿಲಯದ   ಶತಮಾನೋತ್ಸವ ಘಟಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷವಾಗಿ ತಯಾರಾಗಿರುವ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಇಂದು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್  ಲಾಂಛನ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು ನನಗೆ ವಿವಿಯ ಹಳೆಯ ವಿದ್ಯಾರ್ಥಿ ನಿಎನ್ನುವುದಕ್ಕೆ ತುಂಬಾ ಹೆಮ್ಮೆಯಾಗುತ್ತದೆ. ನಮ್ಮ ಪೂರ್ವಜರಾದ ನಾಲ್ವಡಿಕೃಷ್ಣರಾಜ ಒಡೆಯರ್ ಸ್ಥಾಪಿಸಿದ ವಿವಿಯಲ್ಲಿ ಮಾವನವರಾದ ಜಯಚಾಮರಾಜ ಒಡೆಯರ್ ಐದು, ನಮ್ಮ ಯಜಮಾನರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೂರು ಚಿನ್ನದ ಪದಕ ಪಡೆದಿದ್ದರು ಎಂದು ಹೇಳಿದರು. ನಾನು ಹಳೆಯ ವಿದ್ಯಾರ್ಥಿನಿಯಾಗಿದ್ದರಿಂದಲೇ ನನಗೂ-ಈ ವಿವಿಗೂ ಅವಿನಾಭಾವ ಸಂಬಂಧ. ಶತಮಾನೋತ್ಸವ ಲಾಂಛನ ಮಾಡಿದ್ದೆ. ಈಗ ಘಟಿಕೋತ್ಸವ ಲಾಂಛನದ ವಿನ್ಯಾಸ ಬೇಕೆಂದು ಕೇಳಿಕೊಂಡಿದ್ದರಿಂದ ಖುಷಿಯಿಂದಲೇ ಮಾಡಿಕೊಟ್ಟಿದ್ದೆ. ಇಂದು ಅತ್ಯಂತ ಸಂತೋಷದ ದಿನವಾಗಿದೆ ಎಂದರು. ನನಗೆ ಪೈಂಟಿಂಗ್,ಫ್ಯಾಷನ್ ಡಿಸೈನಿಂಗ್ ನಲ್ಲಿ ಆಸಕ್ತಿ ಇರುವುದರಿಂದ ಲಾಂಛನವನ್ನು ವಿಶೇಷವಾಗಿ ವಿನ್ಯಾಸ ಮಾಡಿದ್ದೇನೆ. ಘಟಿಕೋತ್ಸವದ ಅರ್ಥವನ್ನು ಈ ಲಾಂಛನದಲ್ಲಿ ತಿಳಿಯಬಹುದು ಎಂದು ನುಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ  ಕಳೆದ 2016ರಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಕುಲಪತಿಯಾಗಿದ್ದಾಗ ಶತಮಾನೋತ್ಸವ ಸಂಭ್ರಮ ಆಚರಿಸಲಾಗಿದ್ದು,ಈಗ ಶತಮಾನೋತ್ಸವ ಘಟಿಕೋತ್ಸವ ಆಚರಿಸುವ ಹೊಣೆ ನನ್ನ ಪಾಲಿಗೆ ಬಂದಿರುವುದು ಸುದೈವವಾಗಿದೆ ಎಂದರು. ಶತಮಾನೋತ್ಸವ ಘಟಿಕೋತ್ಸವಕ್ಕೆ ದೊಡ್ಡ ಗಣ್ಯಮಹನೀಯರೊಬ್ಬರನ್ನು ಆಹ್ವಾನಿಸಲು ಮಾತುಕತೆ ನಡೆಸಿ ಸಿದ್ಧತೆ ಮಾಡಲಾಗುತ್ತಿದೆ. ಈ ಸಮಾರಂಭಕ್ಕೆ ಬರುವ ಆಶಾಭಾವನೆ ಇದೆ ಎಂದರು. ಮೈಸೂರು ವಿವಿಯಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆ ಮಾಡುವ ಕುರಿತಂತೆ ನೀಲನಕ್ಷೆ ಸಿದ್ಧವಾಗಿದೆ. ವಸ್ತು ಸಂಗ್ರಹಾಲಯದ ಕೆಲಸವೂ ನಡೆಯುತ್ತಿದೆ.  ವಿವಿಯ 456ವಿಭಾಗಗಳು, ಹತ್ತಕ್ಕೂ ಹೆಚ್ಚುಪೀಠಗಳು ರಚನಾತ್ಮಕವಾಗಿ ತನ್ನ ಕಾರ್ಯ ನಿರ್ವಹಿಸಿ ಹೊಸ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ.  ಹಾಗಾಗಿ,ಘಟಿಕೋತ್ಸವವು ದಾಖಲೆಯಾಗಿ ಉಳಿಯುವಂತೆ ಮಾಡಲು ಸಿದ್ಧತೆ ಆರಂಭಿಸಲಾಗಿದೆ ಎಂದರು. ಘಟಿಕೋತ್ಸವದ ಲಾಂಛನವನ್ನ ವಿನ್ಯಾಸಗೊಳಿಸಿಕೊಡುವಂತೆ ರಾಜಮಾತೆ ಅವರಲ್ಲಿ ಕೇಳಿದಾಗ ಸಂತೋಷದಿಂದ ಒಪ್ಪಿ ಮಾಡಿಕೊಟ್ಟಿದ್ದಾರೆ. ಈ ವಿವಿಗೆ ಯದುವಂಶದ ಕೊಡುಗೆ ಅಪಾರವಾಗಿದೆಎಂದು ಸ್ಮರಿಸಿದರು. ಘಟಿಕೋತ್ಸವದಲ್ಲಿ ಹಲವಾರು ಮಹನೀಯರು ಘಟಿಕೋತ್ಸವ ಭಾಷಣ ಮಾಡಿದ್ದರೆ, ಹಲವು ದಿಗ್ಗಜರಿಗೆ ಗೌರವ ಡಾಕ್ಟರೇಟ್ ಕೊಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಡಾ.ರಾಜೇಂದ್ರಪ್ರಸಾದ್, ಅಶುತೋಷ್ ಮುಖರ್ಜಿ ಎಪಿಜೆ ಅಬ್ದುಲ್ ಕಲಾಂ, ಡಾ.ಮನಮೋಹನ್ ಸಿಂಗ್ ಹೀಗೆ ಹಲವಾರು ಮಂದಿ ಭಾಷಣ ಮಾಡಿದ್ದಾರೆ. ಹಾಗಾಗಿ, ಶತಮಾನೋತ್ಸವ ಘಟಿಕೋತ್ಸವದಲ್ಲಿ ಅತಿ ದೊಡ್ಡ ಗಣ್ಯ ವ್ಯಕ್ತಿಯನ್ನು ಆಹ್ವಾನಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ  ಭಾರತೀಯ ವಿಜ್ಞಾನ ಸಂಸ್ಥೆ ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರೊ.ಉದಯ್ ಮೈತ್ರಾ ಆವರ್ತನ ಕೋಷ್ಟಕ ಮತ್ತು ನಾವು ಕುರಿತು ಉಪನ್ಯಾಸ ನೀಡಿದರು. ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: