ಪ್ರಮುಖ ಸುದ್ದಿ

ದೆಹಲಿ ಗಲಭೆ : ಸೂಕ್ತ ಕ್ರಮಕ್ಕೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯ

ರಾಜ್ಯ( ಮಡಿಕೇರಿ) ಫೆ.29 :- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ಮತ್ತು ಎನ್‍ಆರ್‍ಸಿ ಪರ, ವಿರೋಧ ಹೋರಾಟದ ಸಂದರ್ಭ ನಡೆದ ಗಲಭೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಗೃಹ ಇಲಾಖೆ ಹಾಗೂ ದೆಹಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ರಾಷ್ಟ್ರಪತಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮಾಧ್ಯಮ ಪ್ರಕಟಣೆ ನೀಡಿರುವ ಅವರು ದೇಶದ ಕೇಂದ್ರ ಸ್ಥಾನ ದೆಹಲಿಯಲ್ಲೇ ಗಲಭೆ ನಡೆಯುತ್ತಿದ್ದರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾಗಿರುವ ಕೇಂದ್ರ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ದೆಹಲಿ ಸರ್ಕಾರದ ಸುರಕ್ಷತಾ ವೈಫಲ್ಯಗಳೇ ಸಾವು, ನೋವು ಸಂಭವಿಸಲು ಪ್ರಮುಖ ಕಾರಣವೆಂದು ಆರೋಪಿಸಿರುವ ಅವರು, ಮೃತ ಪೊಲೀಸ್ ಸಿಬ್ಬಂದಿಯೊಬ್ಬರ ಕುಟುಂಬಕ್ಕೆ ರೂ.1 ಕೋಟಿಯನ್ನು ಪರಿಹಾರವಾಗಿ ಘೋಷಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ಮೃತಪಟ್ಟ 35 ಕ್ಕೂ ಹೆಚ್ಚು ಮಂದಿಯ ಕುಟುಂಬಕ್ಕೂ ಅಷ್ಟೇ ಮೊತ್ತದ ಪರಿಹಾರ ನೀಡಬೇಕೆಂದು ಒತ್ತಾಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ, ದೇಶದ ಶಾಂತಿ, ಸುವ್ಯವಸ್ಥೆ, ಕೋಮು ಸೌಹಾರ್ದತೆ ಕಾಪಾಡುವ ಮಹತ್ತರ ಜವಬ್ದಾರಿ ಆಡಳಿತಾರೂಢರ ಮೇಲಿದೆ. ಆದರೆ ಶಾಂತಿ ಕದಡುವ ರೀತಿಯ ಪ್ರಚೋದನಾಕಾರಿ ಹೇಳಿಕೆಯನ್ನು ನೀಡುತ್ತಿರುವ ಬಿಜೆಪಿ ಮುಖಂಡರ ಕ್ರಮ ಖಂಡನೀಯ ಎಂದು ಉಸ್ಮಾನ್ ಹೇಳಿದ್ದಾರೆ.
ಸಿಎಎ ಮತ್ತು ಎನ್‍ಆರ್‍ಸಿಯ ಪರ, ವಿರೋಧದ ಹೋರಾಟದಿಂದಾಗಿ ದೇಶದಲ್ಲಿ ಅಶಾಂತಿಯ ವಾತಾವರಣ ಮನೆ ಮಾಡಿದೆ. ಈ ಕಾಯ್ದೆಗಳಲ್ಲಿನ ಗೊಂದಲ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಅವರು, ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಗೊಂದಲಗಳನ್ನು ನಿವಾರಿಸುವುದರೊಂದಿಗೆ ಶಾಂತಿ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: