ಮೈಸೂರು

ಸಮಾಜದಲ್ಲಿ ವಿದ್ಯಾರ್ಥಿಗಳ ಮೂಲಕ ಬದಲಾವಣೆ ತರುವ ಉದ್ದೇಶದಿಂದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ‘ಸಂತೋಷದ ಅನ್ವೇಷಣೆ’ ಜಾಥಾ

ಮೈಸೂರು,ಫೆ.29:- ಸಮಾಜದಲ್ಲಿ ವಿದ್ಯಾರ್ಥಿಗಳ ಮೂಲಕ ಬದಲಾವಣೆ ತರುವ ಉದ್ದೇಶದಿಂದ, ಸಮಾಜಕ್ಕೆ ವಿದ್ಯಾರ್ಥಿಗಳು ತಾವೂ ಕೂಡ ಏನಾದರೂ ಒಳ್ಳೆಯದನ್ನು ನೀಡಬೇಕೆನ್ನುವ ಉದ್ದೇಶದಿಂದ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಇಂದು ‘ಸಂತೋಷದ ಅನ್ವೇಷಣೆ’ ಕುರಿತ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಮಾತೃಮಂಡಳಿ ಸರ್ಕಲ್ ಬಳಿ ಜಾಥಾಕ್ಕೆ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲರಾದ ಕೃಷ್ಣ ಬಂಗೇರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪ್ರತಿವರ್ಷ ಪರಿವರ್ತನಾ ಜಾಥಾ ಹಮ್ಮಿಕೊಳ್ಳುತ್ತಿದ್ದೇವೆ. ಸಮಾಜದಲ್ಲಿ ಮಕ್ಕಳ ಮೂಲಕ ಪರಿವರ್ತನೆಯನ್ನು ತರುವುದೇ ನಮ್ಮ ಉದ್ದೇಶ. ಪ್ರತಿವರ್ಷವೂ ಒಂದೊಂದು ವಿಷಯವನ್ನು ಆರಿಸಿಕೊಳ್ಳುತ್ತೇವೆ. ಈ ಬಾರಿ ನಾವು’ ಸಂತೋಷದ ಅನ್ವೇಷಣೆ’ ಯನ್ನು ಆರಿಸಿಕೊಂಡಿದ್ದೇವೆ ಎಂದರು.

ಸಂತೋಷದಿಂದಿರುವುದರಿಂದ ಆಗುವ ಉತ್ತಮ ಪರಿಣಾಮಗಳೇನು, ಸಂತೋಷದಿಂದಿದ್ದರೆ ನಮಗೇನು ಲಾಭವಾಗಲಿದೆ ಎನ್ನುವುದರ ಕುರಿತು 45 ದಿನ ವಿದ್ಯಾರ್ಥಿಗಳಿಗೆ ಪಾಠ ಮಾಡಿ ವಿದ್ಯಾರ್ಥಿಗಳು ತಮ್ಮಲ್ಲಿ ಅದನ್ನು ರೂಢಿಸಿಕೊಂಡು ಒಂದು ದಿನ ಜಾಥಾ ಮೂಲಕ ಅದನ್ನು ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸಮಾಪ್ತಿಗೊಳಿಸುತ್ತೇವೆ ಎಂದರು.

ಜಾಥಾದಲ್ಲಿ ಮಕ್ಕಳು ನಾಮಫಲಕ ಹಿಡಿದು ಸಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಾರೆ. ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಬದಲಾವಣೆ ತರುವ ಏಜೆಂಟ್ ಗಳ ರೂಪದಲ್ಲಿ ಬಳಸಿಕೊಳ್ಳಲಾಗುತ್ತದೆ. ಮಕ್ಕಳಿಗೂ ಕೂಡ ನಾವು ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ಉದ್ದೇಶ ಬರತ್ತೆ. ತಾವೂ ಕಲಿತು ಇನ್ನೊಬ್ಬರಿಗೆ ತಿಳಿಸಲು ಜಾಥಾದಲ್ಲಿ ಪಾಲ್ಗೊಳ್ಳುತ್ತಾರೆ. 7ನೇ ಬಾರಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ಮಾತೃಮಂಡಳಿಯಿಂದ ಆರಂಭಗೊಂಡ ಜಾಥಾವು ಬಿಎಮ್ ಹೆಬಿಟೇಟ್ ಮಾಲ್ ಬಳಿ ಸಮಾಪ್ತಿಗೊಂಡಿತು.

4ರಿಂದ 9ನೇತರಗತಿಯವರೆಗಿನ 300 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳ ಪೋಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಸರ್ವರೋಗಕ್ಕೂ ಇರುವ ಸಂಜೀವಿನಿ ನಗು. ಎಲ್ಲರ ಜೀವನದಲ್ಲೂ ಇರಲಿ ಮುದ್ದು ನಗು, ಸಂತೋಷವನ್ನು ಹಂಚಿ ಜೀವನವನ್ನು ಆನಂದಿಸಿರಿ, ಆರೋಗ್ಯದ ಗುಟ್ಟು ನಗು, ನೆಮ್ಮದಿಯ ಕುರುಹು ನಗು ಇತ್ಯಾದಿ ಬರಹಗಳಿರುವ ನಾಮಫಲಕವನ್ನು ಹೊತ್ತು ಜಾಥಾದಲ್ಲಿ ಸಾಗಿ ಬಂದರು. ಜಾಥಾಕ್ಕೆ ಚಾಲನೆ ನೀಡಿದ ವೇಳೆ ವಿದ್ಯಾರ್ಥಿಗಳು ಯೋಗ ಮತ್ತು ನೃತ್ಯವನ್ನು ಪ್ರದರ್ಶಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: