ಪ್ರಮುಖ ಸುದ್ದಿ

ನಾಯಕತ್ವದ ಗುಣಕ್ಕೆ ಸಮಯ ಪ್ರಜ್ಞೆ ಅಗತ್ಯ : ಆರ್.ಕೆ.ಬಾಲಚಂದ್ರ ಅಭಿಪ್ರಾಯ

ರಾಜ್ಯ( ಮಡಿಕೇರಿ)ಮಾ.2:- ಉತ್ತಮ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಮಯ ಪ್ರಜ್ಞೆಯ ಅಗತ್ಯವಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಅಭಿಪ್ರಾಯಪಟ್ಟಿದ್ದಾರೆ.
ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವೃತ್ತಿ ಮತ್ತು ಉದ್ಯೋಗ ಕೋಶದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಶನಿವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ನಾಯಕತ್ವದ ಗುಣಗಳ ಬಗ್ಗೆ ಮಾತನಾಡಿದ ಆರ್.ಕೆ.ಬಾಲಚಂದ್ರ ಅವರು ನಾಯಕನಿಗೆ ಸಮಯ ಪ್ರಜ್ಞೆ ಜೀವನದ ಪ್ರಮುಖವಾದ ಅಂಶವಾಗಿದೆ. ಸಮಯವನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳುವ ಚತುರತೆ ಇರಬೇಕು ಎಂದರು.
ಈ ಕಾರ್ಯಕ್ರಮದ ಮೂಲ ಉದ್ದೇಶವೇ ಎಲ್ಲರೂ ಮುಂದೆ ಜವಾಬ್ದಾರಿಯುತವಾಗಿ ಜೀವನವನ್ನು ಕಟ್ಟಿಕೊಳ್ಳಬೇಕು ಹಾಗೂ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಪ್ರಸ್ತುತದಲ್ಲಿ ವಿದ್ಯಾರ್ಥಿಗಳು ರ್ಯಾಂಕ್ ಪಡೆಯುವುದೇ ಒಂದು ದೊಡ್ಡ ಜವಾಬ್ದಾರಿ ಎಂದು ಭಾವಿಸಿರುತ್ತಾರೆ. ಆದರೆ ಅವರು ತಮ್ಮನ್ನು ತಾವು ಹೇಗೆ ರೂಢಿಸಿಕೊಳ್ಳಬೇಕು ಎಂಬುವುದನ್ನು ಮರೆತಿರುತ್ತಾರೆ. ಅಂತಹ ಪರಿಕಲ್ಪನೆಗಳು ಹೋಗಬೇಕೆಂದರೆ ಸಮಾಜದ ಜೊತೆ ಕೈ ಜೋಡಿಸಿದಾಗ ಮಾತ್ರ ಸಾದ್ಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ರಾಷ್ಟ್ರಪೀತ ಮಹಾತ್ಮ ಗಾಂಧೀಜಿ ಅವರ ಆದರ್ಶ ಹಾಗೂ ನಾಯಕತ್ವ ಗುಣಗಳು ಇಂದಿಗೂ ಜೀವಂತ ಮತ್ತು ಎಲ್ಲರಿಗೂ ಮಾದರಿಯಾಗಿದೆ. ಅದನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಯಾರಲ್ಲಿ ಉತ್ತಮ ಮಾನವೀಯ ಸ್ಫರ್ಶವು ಅಡಕವಾಗಿರುತ್ತದೆಯೋ ಅಂತವರು ಉತ್ತಮ ನಾಯಕನಾಗಲು ಸಾಧ್ಯ. ಹಲವಾರು ಮಹಾನ್ ವ್ಯಕ್ತಿಗಳಾದ ನೇಲ್ಸನ್ ಮಂಡೇಲಾ, ಅಬ್ರಾಹಂ ಲಿಂಕನ್, ಮಹಾತ್ಮ ಗಾಂಧೀಜಿ, ಮಾರ್ಟಿನ್ ಲೂಥರ್ ಕಿಂಗ್, ಇವರ ಜೀವನ ಚರಿತ್ರೆಯನ್ನು ಹಾಗೂ ಅವರ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೈ.ಚಿತ್ರಾ ಅವರು ಅಧ್ಯಕ್ಷತೆ ವಹಿಸಿದ್ದರು ಹಾಗೂ ಪ್ರಾಧ್ಯಾಪಕರಾದ ನಿರ್ಮಲ ಮತ್ತು ರಾಘವೇಂದ್ರ ಪ್ರಸಾದ್ ಅವರು ನಿರೂಪಿಸಿದರು. (ಕೆಸಿಐ,.ಎಸ್.ಎಚ್)

Leave a Reply

comments

Related Articles

error: