ಕ್ರೀಡೆ

ಕಿವೀಸ್ ಎದುರು ವೈಟ್ ವಾಶ್ ಮುಖಭಂಗಕ್ಕೆ ಗುರಿಯಾದ ಟೀಂ ಇಂಡಿಯಾ

ಕ್ರೈಸ್ಟ್‌ಚರ್ಚ್,ಮಾ.2-ಭಾರತ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲೂ ನ್ಯೂಜಿಲೆಂಡ್ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇದರಿಂದ ಟೀಂ ಇಂಡಿಯಾ ವೈಟ್ ವಾಶ್ ಮುಖಭಂಗಕ್ಕೆ ಗುರಿಯಾಗಿದೆ.

ಟೆಸ್ಟ್ ನಲ್ಲಿ ಅಗ್ರ ತಂಡವಾಗಿರುವ ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮಹತ್ವದ 120 ಅಂಕಗಳನ್ನು ಕಳೆದುಕೊಂಡಿದೆ. ಆದರೂ ಅಗ್ರಸ್ಥಾನವನ್ನು ತನ್ನ ಬಳಿಯೇ ಉಳಿಸಿಕೊಂಡಿದೆ. ಇನ್ನೊಂದೆಡೆ 120 ಅಂಕಗಳನ್ನು ಬಾಚಿಕೊಂಡಿರುವ ನ್ಯೂಜಿಲೆಂಡ್ ಮೂರನೇ ಸ್ಥಾನಕ್ಕೆ ಭರ್ಜರಿ ನೆಗೆತ ಕಂಡಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 242 ರನ್ ಗಳಿಸಿತ್ತು. ದಿನದಾಟದ ಕೊನೆಗೆ ಕಿವೀಸ್ ತಂಡವು ವಿಕೆಟ್ ನಷ್ಟವಿಲ್ಲದೆ 66 ರನ್ ಗಳಿಸಿತ್ತು. ಭಾನುವಾರ ಆಟ ಮುಂದುವರಿಸಿದ ಕಿವೀಸ್ 235 ರನ್ ಗಳಿಗೆ ಆಲೌಟ್ ಆಯಿತು. ಇದರಿಂದ ಭಾರತ ಏಳು ರನ್ ಗಳ ಸಣ್ಣ ಮುನ್ನಡೆಗಳಿಸಿತ್ತು. ಭಾನುವಾರದ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿತ್ತು.

90/6 ಎಂಬಲ್ಲಿದ್ದ ಮೂರನೇ ದಿನದಾಟ ಆರಂಭಿಸಿದ ಭಾರತದ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಲ್ಲದೆ 34 ರನ್ ಪೇರಿಸುವುದರೊಳಗೆ ಉಳಿದಿರುವ ನಾಲ್ಕು ವಿಕೆಟುಗಳನ್ನು ಕಳೆದುಕೊಂಡಿತು. ಈ ಮೂಲಕ 46 ಓವರ್‌ಗಳಲ್ಲಿ ಕೇವಲ 128 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಇದರೊಂದಿಗೆ ಕಿವೀಸ್ ಗೆಲುವಿಗೆ 132 ರನ್‌ಗಳ ಗುರಿಯನ್ನು ನೀಡಿತು.

132 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಕಿವೀಸ್‌ಗೆ ಭಾರತೀಯ ಬೌಲರ್‌ಗಳಿಂದ ಯಾವುದೇ ರೀತಿಯ ಸವಾಲುಗಳು ಎದುರಾಗಲಿಲ್ಲ. ಆರಂಭಿಕರಾದ ಟಾಮ್ ಬ್ಲಂಡೆಲ್ ಹಾಗೂ ಟಾಮ್ ಲೇಥಮ್ ಆಕರ್ಷಕ ಅರ್ಧಶತಕ ಬಾರಿಸದಷ್ಟೇ ಅಲ್ಲದೆ ಶತಕದ ಜೊತೆಯಾಟ ನೀಡಿ ತಂಡದ ಗೆಲುವನ್ನು ಸುಲಭಗೊಳಿಸಿದರು.

74 ಎಸೆತಗಳನ್ನು ಎದುರಿಸಿದ ಟಾಮ್ ಲೇಥಮ್ 10 ಬೌಂಡರಿಗಳಿಂದ 52 ರನ್ ಗಳಿಸಿದರು. ಹಾಗೆಯೇ ಟಾಮ್ ಬ್ಲಂಡೆಲ್ 113 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ನಾಯಕ ಕೇನ್ ವಿಲಿಯಮ್ಸನ್ (5) ಬೇಗನೇ ನಿರ್ಗಮಿಸಿದರು. ಅಂತಿಮವಾಗಿ 36 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇನ್ನುಳಿದಂತೆ ರಾಸ್ ಟೇಲರ್ (5*) ಹಾಗೂ ಹೆನ್ರಿ ನಿಕೋಲ್ಸ್ (5*) ರನ್ ಗಳಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ ಎರಡು ಮತ್ತು ಉಮೇಶ್ ಯಾದವ್ ಒಂದು ವಿಕೆಟ್ ಪಡೆದರು. ಕಿವೀಸ್ ಪರ ಟ್ರೆಂಟ್ ಬೌಲ್ಟ್ ನಾಲ್ಕು, ಟಿಮ್ ಸೌಥಿ ಮೂರು ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಹಾಗೂ ನೀಲ್ ವ್ಯಾಗ್ನರ್ ತಲಾ ಒಂದು ವಿಕೆಟ್ ಕಿತ್ತು ಮಿಂಚಿದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 10 ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು. ಈ ಮೊದಲು ಟ್ವೆಂಟಿ-20 ಸರಣಿಯಲ್ಲಿ 5-0 ಅಂತರದ ಗೆಲುವು ದಾಖಲಿಸಿದ್ದ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ 0-3ರ ಅಂತರದ ಮುಖಭಂಗಕ್ಕೊಳಗಾಗಿತ್ತು. ಇದೀಗ ಟೆಸ್ಟ್ ಸರಣಿಯಲ್ಲೂ 0-2ರ ಅಂತರದ ಸರಣಿ ಸೋಲಿನ ಹಿನ್ನೆಡೆ ಎದುರಿಸಿದೆ. (ಎಂ.ಎನ್)

Leave a Reply

comments

Related Articles

error: