ಮೈಸೂರು

ಹೆಚ್ಚು ಹೆಚ್ಚು ಜನರು ಅಭಿಯಾನಕ್ಕೆ ಸೇರುವಂತೆ ಉತ್ತೇಜಿಸಲು ಆಮ್ ಆದ್ಮಿ ಪಕ್ಷದಿಂದ ಸದಸ್ಯತ್ವ ಅಭಿಯಾನ : ಮಾಲವಿಕ ಗುಬ್ಬಿವಾಣಿ

ಮೈಸೂರು,ಮಾ.2:- ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲವು ಸಾಧಿಸಿದ ನಂತರ ಆಮ್ ಆದ್ಮಿ ಪಕ್ಷವು ದೇಶದ ಪ್ರತಿಯೊಂದು ಮನೆಗೂ ‘ಕಾಯಕದ ರಾಜಕೀಯ’ ಸಂದೇಶವನ್ನು ಕೊಂಡೊಯ್ಯಲು ರಾಷ್ಟ್ರ ನಿರ್ಮಾಣ ಅಭಿಯಾನವನ್ನು ಪ್ರಾರಂಭಿಸಿದ್ದು, ಈ ಅಭಿಯಾನವು ಬೆಂಗಳೂರಿನಿಂದ ಆರಂಭವಾಗಿ ಕರ್ನಾಟಕದಾದ್ಯಂತ ಮಾರ್ಚ್ 23ರವರೆಗೆ ಮುಂದುವರಿಯಲಿದೆ ಎಂದು ಪಕ್ಷದ ಮೈಸೂರು ಘಟಕದ ಮುಖಂಡರಾದ ಮಾಲವಿಕ ಗುಬ್ಬಿವಾಣಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೆಹಲಿಯ ಅರವಿಂದ್ ಕೇಜ್ರೀವಾಲ್ ಅಭಿವೃದ್ಧಿಯ ಮಾದರಿಯನ್ನು ಕರ್ನಾಟಕದ ಪ್ರತಿಯೊಂದು ಮನೆಗೂ ಪಕ್ಷವು ಕೊಂಡೊಯ್ಯಲು ಉದ್ದೇಶಿಸಿದ್ದು ರಾಷ್ಟ್ರವನ್ನು ಮುಂದೆ ಕೊಂಡೊಯ್ಯಲು ‘ಕಾಯಕದ ರಾಜಕೀಯ’ವನ್ನು ಬೆಂಬಲಿಸುವಂತೆ ಜನರಿಗೆ ಕರೆ ಕೊಡಲಾಗುತ್ತದೆ. ಕಾಯಕದ ರಾಜಕಾರಣವನ್ನು ರಾಷ್ಟ್ರದಾದ್ಯಂತ ಜನರು ಮೆಚ್ಚಿದ್ದು ಕೇವಲ 24ಗಂಟೆಗಳಲ್ಲಿ 11ಲಕ್ಷ ಜನರು 7412042042 ಮೊಬೈಲ್ ಗೆ ಸಂಖ್ಯೆ ಮಿಸ್ಡ್ ಕಾಲ್ ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ಅಭಿಯಾನಕ್ಕೆ ಸೇರಿದ್ದಾರೆಂದರು.

ಶಾಲೆಗಳು, ಆಸ್ಪತ್ರೆಗಳು, ನೀರು, ವಿದ್ಯುತ್ ಮತ್ತು ಮಹಿಳೆಯರ ಸುರಕ್ಷತೆ ಸೇರಿದಂತೆ ದೆಹಲಿಯ ಕೇಜ್ರೀವಾಲ್ ಸರ್ಕಾರವು ಎಲ್ಲಾ ಕ್ಷೇತ್ರಗಳಲ್ಲಿ ಮಾಡಿದ ಪರಿಣಾಮಕಾರಿ ಅಭಿವೃದ್ಧಿಯೇ ಅಗಾಧ ಬೆಂಬಲಕ್ಕೆ ಕಾರಣವಾಗಿದೆ ಎಂದರು. ದೇಹಲಿಯ ಕೇಜ್ರೀವಾಲ್ ಅಭಿವೃದ್ಧಿಯ ಮಾದರಿಯನ್ನು ಹಲವು ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಕೆಲವು ರಾಜ್ಯಗಳು ದೆಹಲಿಯಂತೆ ಉಚಿತ ವಿದ್ಯುತ್ ನೀಡಲು ಪ್ರಾರಂಭಿಸಿವೆ. 7412042042 ಮೊಬೈಲ್ ಸಂಖ್ಯೆಯುಳ್ಳ ಪೋಸ್ಟರ್ ಕೂಡ ಜಾರಿ ಮಾಡಲಾಗುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಾವಿರಾರು ಪೋಸ್ಟರ್ ಗಳನ್ನು ಹಾಕಲಾಗುವುದು. ಇದರಿಂದಾಗಿ ಸಂದೇಶವು ಪ್ರತಿಯೊಂದು ಪ್ರದೇಶ ಮತ್ತು ಮೂಲೆ-ಮೂಲೆಗಳಲ್ಲಿನ ಜನರಿಗೆ ತಲುಪುತ್ತದೆ. ರಾಷ್ಟ್ರ ನಿರ್ಮಾಣದ ಬಗ್ಗೆ ಜನರಿಗೆ ತಿಳಿಸಲು ಮತ್ತು ಹೆಚ್ಚು ಹೆಚ್ಚು ಜನರು ಅಭಿಯಾನಕ್ಕೆ ಸೇರುವಂತೆ ಉತ್ತೇಜಿಸಲು ಕರ್ನಾಟಕ ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳು ಮತ್ತು ಪ್ರಮುಖ ನಗರಗಳಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಗಿದೆ ಎಂದರು.

ಮುಖಂಡರಾದ ಜಿ.ಆರ್. ವಿದ್ಯಾರಣ್ಯ ಮಾತನಾಡಿ ದೆಹಲಿ ಬಜೆಟ್‍ನಲ್ಲಿ ಶಿಕ್ಷಣಕ್ಕೆ ಶೇ. 26 ಮೀಸಲಿಟ್ಟಿದ್ದರೆ ರಾಜ್ಯದಲ್ಲಿ ಅದು ಕೇವಲ ಶೇ. 11.3 ರಷ್ಟಿದೆ, ಅಲ್ಲಿ ಸರ್ಕಾರಿ ಶಾಲೆಗಳಲ್ಲಿ 12 ನೇ ತರಗತಿ ಓದಿ ಉತ್ತೀರ್ಣರಾಗುವವರು ಶೇ. 96 ರಷ್ಟಿದ್ದರೆ, ಇಲ್ಲಿ ಶೇ. 58 ಇದೆ. ಆರೋಗ್ಯಕ್ಕೆ ಅಲ್ಲಿ ಬಜೆಟ್‍ನ ಶೇ. 14 ರಷ್ಟು ಮೀಸಲಿಟ್ಟಿದ್ದರೆ ಇಲ್ಲಿ ಅದು ಕೇವಲ 3.4 ರಷ್ಟಿದೆ. ಅಲ್ಲಿ ಉಚಿತವಾಗಿ 20 ಸಾವಿರ ಲೀಟರ್ ನೀರು ನೀಡುತ್ತಿದ್ದರೆ, ಇಲ್ಲಿ 220 ರೂ. ಪಾವತಿಸಬೇಕು, ತಿಂಗಳಿಗೆ 200 ಯೂನಿಟ್ ವಿದ್ಯುತ್ ಉಚಿತ ನೀಡುತ್ತಿದ್ದರೆ, ಇಲ್ಲಿ ಪ್ರತಿ ಯೂನಿಟ್‍ಗೆ 6.5 ರೂ. ಪಾವತಿಸಬೇಕು. ಅಲ್ಲಿ 203 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದರೆ, ಇಲ್ಲಿ ಕೆರೆಗಳು ಹಾಗೂ ಜಲಮೂಲವನ್ನು ಒತ್ತುವರಿ ಮಾಡಲಾಗುತ್ತಿದೆ.

ಅಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ಇದ್ದರೆ, ಇಲ್ಲಿ ಅದು ಲಭ್ಯವಿಲ್ಲ, ಅಲ್ಲಿ ಮನೆ ಬಾಗಿಲಿಗೇ 16 ಇಲಾಖೆಗಳ 100 ಸೇವೆ ಲಭ್ಯವಿದ್ದರೆ, ಇಲ್ಲಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಜಾರಿ ಮಾಡುವುದಾಗಿ ಘೋಷಿಸಲಾಗಿದೆ. ಈ ರೀತಿ ಎಲ್ಲದರಲ್ಲಿಯೂ ಕೇಜ್ರಿವಾಲ್ ಮಾದರಿ ಉತ್ತಮವಾಗಿದ್ದು, ಈ ವಿಷಯಗಳನ್ನು ಇಲ್ಲಿನ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟು ಬೆಂಬಲ ಕೋರಲಾಗುವುದೆಂದರು.

ಪಕ್ಷದ ಮತ್ತೋರ್ವ ಮುಖಂಡ ರೇಣುಕಾಪ್ರಸಾದ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: