ಮೈಸೂರು

ಪೋಷಕರನ್ನು ಕಳೆದುಕೊಂಡು, ಪಾರ್ಶ್ವವಾಯು ಪೀಡಿತ ತನ್ನ ಅಕ್ಕನ ಆರೈಕೆಗಾಗಿ ಶಾಲೆಯನ್ನೇ ತೊರೆದು ಸಂಕಷ್ಟದಲ್ಲಿದ್ದ ಬಾಲಕನಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳ ಸಹಾಯಹಸ್ತ

ಮೈಸೂರು,ಮಾ.3:-  ಪೋಷಕರನ್ನು ಕಳೆದುಕೊಂಡು, ಪಾರ್ಶ್ವವಾಯು ಪೀಡಿತ ತನ್ನ ಅಕ್ಕನ ಆರೈಕೆಗಾಗಿ ಶಾಲೆಯನ್ನೇ ತೊರೆದು ಸಂಕಷ್ಟದಲ್ಲಿದ್ದ ಬಾಲಕನಿಗೆ ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಸಹಾಯಹಸ್ತ ನೀಡಿದ್ದಾರೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಆಲನಹಳ್ಳಿ ಗ್ರಾಮದ ಮಂಜುಳಾ ಮತ್ತು ಕುಮಾರ್ ದಂಪತಿ ಪುತ್ರ ಆಕಾಶ್ (15) ಹಾಗೂ ತನ್ನ ಅಕ್ಕ ಅನುಷಾ (17) ಪೋಷಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ನಿನ್ನೆ ಮೈಸೂರಿನ ಚಿಗುರು ಆಶ್ರಮಕ್ಕೆ ಅನುಷಾಳನ್ನು ಸೇರಿಸಿದ್ದು, ಆಕಾಶ್‌ನನ್ನು ಮೈಸೂರಿನ ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಸೇರಿಸಿದ್ದಾರೆ.

ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ಅನುಷಾಳನ್ನು ತಾತ್ಕಾಲಿಕವಾಗಿ ಚಿಗುರು ಆಶ್ರಯ ಕೇಂದ್ರಕ್ಕೆ ಪ್ರವೇಶಾತಿ ಮಾಡಿಸಿದ್ದು, ಕೆಲವೇ ದಿನಗಳಲ್ಲಿ ವೈದ್ಯಕೀಯ ಸೌಲಭ್ಯವಿರುವ ಕೇಂದ್ರಕ್ಕೆ ದಾಖಲಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ದಿವಾಕರ್   ತಿಳಿಸಿದರು.

ಗ್ರಾಮದ ಸಮೀಪದಲ್ಲಿರುವ ಪ್ರೌಢಶಾಲೆಯಲ್ಲಿ ಆಕಾಶ್ 8ನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಅನಾರೋಗ್ಯದಿಂದ ತಂದೆ ನಿಧನರಾದರು. ಇದಾದ ಎರಡು ತಿಂಗಳಲ್ಲೇ ತಾಯಿಯೂ ಮರಣ ಹೊಂದಿದರು.  ಅಕ್ಕನ ಆರೈಕೆ ಹಾಗೂ ಮನೆಯ ನಿರ್ವಹಣೆಗೆಂದು ಶಾಲೆ ಬಿಟ್ಟ ಆಕಾಶ್ ಕೂಲಿ ಮಾಡುವಲ್ಲಿ ನಿರತನಾದ.

ಅಕ್ಕನ ಆರೈಕೆಗಾಗಿ ತಮ್ಮ ಶಾಲೆಯನ್ನು ತೊರೆದಿದ್ದ ಮಾನವೀಯ ಅಂತಃಕರಣ ಮುಟ್ಟುವ ಈ ಘಟನೆಯು ಮಾಧ್ಯಮದಲ್ಲಿ ವರದಿಯಾಗಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್ ಹಾಗೂ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಜನಸ್ನೇಹಿ ಸಹಾಯವಾಣಿ ಕೇಂದ್ರ ಈ ವರದಿಯನ್ನು ಗಮನಿಸಿ ಪರಿಹಾರ ಕ್ರಮಕ್ಕಾಗಿ ಸ್ಥಳಿಯ ಅಧಿಕಾರಿಗಳಿಗೆ ತಿಳಿಸಿತ್ತು. ಅದರಂತೆಯೇ ತಹಶೀಲ್ದಾರರು ಸೇರಿದಂತೆ ತಾಲೂಕಿನ ಅಧಿಕಾರಿಗಳು ಭೇಟಿ ನೀಡಿ ಕ್ರಮಕ್ಕೆ ಮುಂದಾದರು.

ಅನಾರೋಗ್ಯದಿಂದ ಬಳಲುತ್ತಿರುವ ಅಕ್ಕನ ಆರೈಕೆಗಾಗಿ ಮತ್ತು ಜೀವನ ನಿರ್ವಹಣೆಗಾಗಿ ಕೂಲಿ ಮಾಡುತ್ತಿದ್ದ ಆಕಾಶ್ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರೇವಣ್ಣ ಅವರ ಬಳಿ ಹೇಳಿದ್ದ. ಇದಕ್ಕೆ ಸ್ಪಂದಿಸಿದ ಅವರು, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆಕಾಶ್ ಈ ವರ್ಷವೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವಂತೆ ಕೋರಿ ಡಿಡಿಪಿಐಗೆ ಪತ್ರವನ್ನು ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ಅವರು, ಈ ಪ್ರಕರಣದ ಸಂಬಂಧ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರ ಜತೆ ಚರ್ಚಿಸಿದ್ದರು. ಬಾಲಕನ ಹಾಜರಾತಿ ಕಡಿಮೆ ಇರುವುದರಿಂದ ಈ ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗದು. ಅಲ್ಲದೆ ಆತ ಪರೀಕ್ಷೆಗೆ ಯಾವುದೇ ಸಿದ್ಧತೆ ನಡೆಸಿಲ್ಲ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ತರಗತಿಗೆ ಹಾಜರಾಗಿ ಪರೀಕ್ಷೆ ಬರೆಯಲಿ ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ಸಲಹೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದವರೆಗೆ ಬಾಲಕನು ಮೈಸೂರಿನಲ್ಲಿರುವ ಬಾಲಕರ ಬಾಲಮಂದಿರದಲ್ಲಿ ಇರಿಸಿ ಅಗತ್ಯ ಮೂಲಭೂತ ಸೌಲಭ್ಯದೊಂದಿಗೆ ಸೇತುಬಂಧ ಕಾರ್ಯಕ್ರಮದಡಿ ಶಿಕ್ಷಣ ಕೊಡಿಸಲಾಗುತ್ತಿದ್ದು, ಹತ್ತನೇ ತರಗತಿಗೆ ಹಾಜರಾಗಿ ಶಿಕ್ಷಣ ಪಡೆದು ಪರೀಕ್ಷೆ ತೆಗೆಕೊಳ್ಳಲಿದ್ದಾನೆ.

ಇವರ ರಕ್ಷಣಾ ತಂಡದಲ್ಲಿ ಸಮಾಜ ಸೇವಕಿ ಎಂ.ಡಿ.ರಾಧಾ, ಆಪ್ತ ಸಮಾಲೋಚಕರಾದ ಮಮತಾ, ರವಿಕುಮಾರ್, ಶ್ರೀನಿವಾಸ ರಾಜೇ ಅರಸ್ ಕಾರ್ಯನಿರ್ವಹಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: