ಮೈಸೂರು

ಬಂಗಾರ ವರ್ಣದಲ್ಲಿ ಅರಳಿ ನಳನಳಿಸುತ್ತಿದೆ ಟಬುಬಿಯ ರೋಸಿಯ

ಇನ್ನೇನು ಕೆಲವೇ ದಿನಗಳಲ್ಲಿ ವಸಂತನ ಆಗಮನವಾಗಲಿದೆ. ಈ ಋತುವಿನಲ್ಲಿ ಗಿಡಮರಗಳು ಹಸಿರೆಲೆಗಳಿಂದ ನಳನಳಿಸಿ, ಹೂವು, ಹಣ್ಣು ಕಾಯಿಗಳಿಂದ ಶೃಂಗಾರಗೊಂಡಿರುತ್ತದೆ. ಹೂದೋಟಗಳಲ್ಲಿ ಉದ್ಯಾನವನಗಳಲ್ಲಿ ವಿವಿಧ ರೀತಿಯ ಪಕ್ಷಿಗಳ ಕೂಜನ ಮನಸ್ಸಿಗೆ ಮುದ ನೀಡುತ್ತದೆ. ಬೇರೆ ಬೇರೆ ಪ್ರದೇಶಗಳಿಂದ ಪಕ್ಷಿಗಳು ವಲಸೆಗೆ ಬರುತ್ತವೆ. ಅವೆಲ್ಲವುಗಳನ್ನು ನೋಡಲು ಎರಡು ಕಣ್ಣುಗಳು ಸಾಲದು.ಅದರಲ್ಲೂ ಮೈಸೂರಿನ ಹಲವೆಡೆ ಹಳದಿ ಬಣ್ಣದ ಹೂಗಳು ಅರಳಿ ನಿಂತಿದ್ದು ನೋಡುಗರನ್ನು ತನ್ನತ್ತ ಆಕರ್ಷಿಸುತ್ತಿದೆ.

ಈ ಹೂವಿನ ಹೆಸರು ಟಬುಬಿಯ ರೋಸಿಯ. ಇದರ ಸಾಮಾನ್ಯ ಹೆಸರು ರೊಬೆಲ್. ಇದನ್ನು ಟ್ರಂಪೆಟ್ ಟ್ರೀ ಎಂದೂ ಕರೆಯಲಾಗುತ್ತದೆ. ಅಮೇರಿಕ, ಮೆಕ್ಸಿಕೋ, ಅರ್ಜೆಂಟೈನಾ, ಕ್ಯೂಬಾಗಳಲ್ಲಿಯೂ ಇದನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ. ಇದೀಗ ಭಾರತದಲ್ಲಿಯೂ ಇದನ್ನು ಹೆಚ್ಚು ಬೆಳೆಸಲಾಗುತ್ತದೆ. ಮೈಸೂರು ವಿಶ್ವವಿದ್ಯಾಲಯದ ಹತ್ತಿರ ಹಾಗೂ ನಗರದ ಹಲವೆಡೆ ರಸ್ತೆಗಳ ಪಕ್ಕದಲ್ಲಿ ನಸುನಗು ಸೂಸಿ ಅರಳಿರುವ ಹೂಗಳು ಗಮನ ಸೆಳೆಯುತ್ತಿವೆ.

ಮರದಲ್ಲಿ ಒಂದು ಹಸಿರು ಎಲೆಯೂ ಇಲ್ಲದೇ ಬಂಗಾರವರ್ಣದಲ್ಲಿ ಅರಳಿ ನಸುನಗುತ್ತಿರುವ ಈ ಹೂವಿನ ಸೌಂದರ್ಯವನ್ನು ಒಂದು ಕ್ಷಣ ರೆಪ್ಪೆ ಮಿಟುಕಿಸದೇ, ವೀಕ್ಷಿಸದೇ ತೆರಳಲಾರರು. ಬಹುಶ: ಅದಕ್ಕೇ ಇರಬೇಕು ಹೂವು ಎಲ್ಲಾ ಸೌಂದರ್ಯವನ್ನು ತನ್ನಲ್ಲೇ ಅಡಗಿಸಿಕೊಂಡಿದೆ ಎಂದು ಕವಿಗಳು ವರ್ಣಿಸುತ್ತಿರುವುದು. ಅದೇನೇ ಇರಲಿ ಬಿಸಿಲಿನ ಝಳದಲ್ಲೂ ಮನಸ್ಸಿಗೆ ಮುದ ನೀಡುವ ಹೂಗಳನ್ನೂ ನೋಡಿದರೆ ಅದೇನೋ ಆನಂದ ಸಿಗುವುದು ಮಾತ್ರ ಸುಳ್ಳಲ್ಲ. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: