ಮೈಸೂರು

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ : ಪರೀಕ್ಷೆ ಬರೆಯಲಿದ್ದಾರೆ 35,004 ವಿದ್ಯಾರ್ಥಿಗಳು ; ಕೇಂದ್ರದ ಸುತ್ತ ಸಿಸಿ ಕ್ಯಾಮರಾ ಕಣ್ಗಾವಲು

ಮೈಸೂರು,ಮಾ.4:- ಜಿಲ್ಲೆಯಲ್ಲಿ  ಇಂದಿನಿಂದ ಮಾ. 23ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ಕೈಗೊಂಡಿದೆ. ಈ ಬಾರಿ ಒಟ್ಟು 35,004 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು  15 ನಿಮಿಷ ಮೊದಲೇ ಪರೀಕ್ಷಾ ಕೇಂದ್ರದಲ್ಲಿರುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದು, ತಮ್ಮ ನೋಂದಣಿ ಸಂಖ್ಯೆ ಯಾವ ಕೊಠಡಿಯಲ್ಲಿದೆ ಎಂಬುದನ್ನು ಫಲಕದಲ್ಲಿ ನೋಡಿ ಖಚಿತಪಡಿಸಿಕೊಂಡರು.

ಇನ್ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವಿಷಯಕ್ಕೆ ಸಂಬಂಧಿಸಿದಂತೆ ಮನನ ಮಾಡಿಕೊಳ್ಳುವುದು, ಚರ್ಚಿಸುತ್ತಿರುವುದು ಕಂಡು ಬಂತು.

28,813 ಹೊಸ ವಿದ್ಯಾರ್ಥಿಗಳು, 4,668 ರಿಪೀಟರ್ಸ್, 1,523 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 17,226 ಬಾಲಕರು, 17,738 ಬಾಲಕಿಯರು ಇದ್ದಾರೆ. ಜಿಲ್ಲೆಯಲ್ಲಿ ಒಟ್ಟು 50 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ನಗರದಲ್ಲಿ 26 ಮತ್ತು ಗ್ರಾಮಾಂತರದಲ್ಲಿ 24 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.  ಪರೀಕ್ಷಾ ಅಕ್ರಮಗಳನ್ನು ತಡೆಯಲು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯಲು 10 ಮಾರ್ಗಗಳನ್ನು ಗುರುತಿಸಲಾಗಿದೆ.

ಪ್ರತಿದಿನ ಬೆಳಗ್ಗಿನ ಜಾವ ಮೈಸೂರಿನಿಂದ 50 ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಪೂರೈಕೆಯಾಗಲಿದೆ. ಜಿಲ್ಲಾ ಕೇಂದ್ರದಲ್ಲಿ ತೆರೆದಿರುವ ಕಂಟ್ರೋಲ್‌ರೂಂ ಹಾಗೂ ಪರೀಕ್ಷಾ ಕೇಂದ್ರದಲ್ಲಿ ತೆರೆದಿರುವ ಕಂಟ್ರೋಲ್‌ರೂಂನಲ್ಲೂ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದ್ದು, ಪ್ರಶ್ನೆ ಪತ್ರಿಕೆಗಳ ರವಾನೆಯ ಮೇಲೆ ಕ್ಯಾಮರಾ ಕಣ್ಗಾವಲಿರಿಸಲಿದೆ. ಸಿಸಿ ಕ್ಯಾಮರಾ ಮಾತ್ರವಲ್ಲದೆ ಪರೀಕ್ಷಾ ಅಕ್ರಮ ತಡೆಯಲು ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಿಬ್ಬಂದಿ ನಿಯೋಜಿಸಲಾಗಿದ್ದು, ಇವರನ್ನು ಪ್ರತಿ ಮೂರು ದಿನಕ್ಕೊಮ್ಮೆ ಪಕ್ಕದ ಪರೀಕ್ಷಾ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗುತ್ತದೆಯಲ್ಲದೆ ತಾಲೂಕು ಮತ್ತು ಜಿಲ್ಲಾಮಟ್ಟದ ಜಾಗೃತ ದಳ ರಚಿಸಲಾಗಿದೆ.

ಸ್ಮಾರ್ಟ್ ಫೋನ್‌ಗೆ ಕಡಿವಾಣ

ಪರೀಕ್ಷಾ ಕೇಂದ್ರಗಳಿಗೆ ಸ್ಮಾರ್ಟ್ ಫೋನ್‌ಗಳನ್ನು ಕೊಂಡೊಯ್ಯಲು ಪರೀಕ್ಷಾ ಸಿಬ್ಬಂದಿಗೆ ಅವಕಾಶ ಇತ್ತು. ಆದರೆ, ಪ್ರಥಮ ಬಾರಿಗೆ ಇದಕ್ಕೆ ಕಡಿವಾಣ ಹಾಕಲಾಗಿದ್ದು, ಬೇಸಿಕ್‌ ಸೆಟ್‌ ಅನ್ನು ಮಾತ್ರ ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಒಂದು ವೇಳೆ ಸ್ಮಾರ್ಟ್‌ಫೋನ್ ತಂದರೂ ಪರೀಕ್ಷಾ ಮುಖ್ಯಸ್ಥರ ಬಳಿ ನೀಡಬೇಕು. ಪರೀಕ್ಷಾ ಮುಖ್ಯಸ್ಥರು ಸಹ ಸ್ಮಾರ್ಟ್‌ಫೋನ್ ಬಳಕೆ ಮಾಡುವಂತಿಲ್ಲ. ಒಂದು ವೇಳೆ ಬಳಕೆ ಮಾಡಿದರೆ ಸೈಬರ್ ಕ್ರೈಂನಡಿ ಪ್ರಕರಣ ದಾಖಲಿಸಿ 5 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ.

ಅಡಿಷನಲ್‌ಶೀಟ್ ಇಲ್ಲ

ಇದುವರೆಗೆ ವಿದ್ಯಾರ್ಥಿಗಳಿಗೆ ಉತ್ತರ ಬರೆಯಲು ಅಡಿಷನಲ್‌ಶೀಟ್ ನೀಡಲಾಗುತ್ತಿತ್ತು. ಸಾಕಷ್ಟು ಬಾರಿ ಈ ಅಡಿಷನಲ್ ಶೀಟ್ ಕಿತ್ತು ಹೋಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು 40 ಪೇಜ್ ಒಟ್ಟಿಗೆ ಇರುವ ಉತ್ತರ ಪತ್ರಿಕೆಯನ್ನು ನೀಡಲಾಗಿದೆ.

ಪರೀಕ್ಷಾ ವೇಳಾಪಟ್ಟಿ

ಮಾ.4 ರಂದು ಇತಿಹಾಸ, ಭೌತಶಾಸ್ತ್ರ, ಬೇಸಿಕ್ ಮ್ಯಾಥ್ಸ್, 5ಕ್ಕೆ ತಮಿಳು, ತೆಲುಗು, ಮಲಯಾಳ, ಮರಾಠಿ, ಅರೇಬಿಕ್, ಫ್ರೆಂಚ್, 6ಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದುಸ್ತಾನಿ ಸಂಗೀತ, 7ಕ್ಕೆ ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿದೆ.

ಮಾ.8 ರಂದು ಭಾನುವಾರದ ರಜೆ ಇದ್ದು, 9 ರಂದು ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೊಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆ್ಯಂಡ್ ವೆಲ್‌ನೆಸ್, 10 ರಂದು ಉರ್ದು, 11 ರಂದು ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಗಣಿತ, 12 ರಂದು ಭೂಗೋಳಶಾಸ್ತ್ರ, 13 ರಂದು ಶಿಕ್ಷಣ, 14 ರಂದು ಮನೋವಿಜ್ಞಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ವಿಜ್ಞಾನ ಪರೀಕ್ಷೆ ನಡೆಯಲಿದೆ.

15 ರಂದು ಭಾನುವಾರದ ರಜೆ ಇದ್ದು, 16 ರಂದು ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ, 17 ರಂದು ಅರ್ಥಶಾಸ್ತ್ರ, ಜೀವಶಾಸ್ತ್ರ, 18 ರಂದು ಹಿಂದಿ, 19 ರಂದು ಕನ್ನಡ, 20 ರಂದು ಸಂಸ್ಕೃತ, 21 ರಂದು ರಾಜ್ಯಶಾಸ್ತ್ರ, ಸ್ಟಾಟಿಸ್ಟಿಕ್ಸ್, 22 ರಂದು ಭಾನುವಾರದ ರಜೆ ಇದ್ದು, 23 ರಂದು ಇಂಗ್ಲಿಷ್ ಪರೀಕ್ಷೆ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: