ಮೈಸೂರು

ಮಾರ್ಚ್ 13ರಂದು ವಿವಾಹ ನಿಶ್ಚಯವಾಗಿದ್ದ ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ : ಬೆಟ್ಟದಪುರದಲ್ಲಿ ಘಟನೆ

ಮೈಸೂರು,ಮಾ.4:-   ಮಾರ್ಚ್ 13ರಂದು ವಿವಾಹ ನಿಶ್ಚಯವಾಗಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಕೃಷಿ ಕಚೇರಿ ಬಳಿಯ ಬೆಟ್ಟದ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಸುರಗಳ್ಳಿ ಗ್ರಾಮದ ರವಿ ಕುಮಾರ್ ಹಲ್ಲೆಗೊಳಗಾದ ಯುವಕನಾಗಿದ್ದು, ಎಲ್ ಎಲ್ ಬಿ  ವಿದ್ಯಾಭ್ಯಾಸ ಮುಗಿಸಿ ಕಳೆದ ಒಂದು ವರ್ಷದಿಂದ ಗ್ರಾಮದಲ್ಲಿ ವಾಸವಾಗಿದ್ದ. ಈತನಿಗೆ    ಮಾ.13ರಂದು ಬೆಟ್ಟದಪುರದ ರೈತ ಮುಖಂಡ ದೇವರಾಜು ಎಂಬವರ ತಂಗಿಯ ಮಗಳ ಜೊತೆ ಮದುವೆ ನಿಶ್ಚಯವಾಗಿತ್ತು. ಸೋಮವಾರ ಸಂಜೆಯ ವೇಳೆ ರವಿಕುಮಾರ್ ಹೊಟ್ಟೆ, ಪಕ್ಕೆ, ಬೆನ್ನಿನಲ್ಲಿ ತೀವ್ರ ಗಾಯಗಳಾಗಿ ರಕ್ತಸ್ರಾವದಿಂದ ಕೃಷಿ ಇಲಾಖೆ ಬಳಿಯ ಬೆಟ್ಟದ ರಸ್ತೆಯಲ್ಲಿ ಬಿದ್ದಿರುವುದಾಗಿ ಬೆಟ್ಟದಪುರದಲ್ಲಿ ರವಿಕುಮಾರ್ ಸಹೋದರ ಕುಮಾರಸ್ವಾಮಿಯವರಿಗೆ ದೇವರಾಜು ಎಂಬವರು ಕರೆ ಮಾಡಿ ತಿಳಿಸಿದ್ದರು.  ಸ್ಥಳೀಯರ ಸಹಾಯದಿಂದ ರವಿ ಕುಮಾರ್ ಅವರನ್ನು ಬೆಟ್ಟದಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.   ಕೃಷಿ ಕಚೇರಿಯ ಆವರಣದಲ್ಲಿ ಅಲ್ಲಲ್ಲಿ ರಕ್ತದ ಕಲೆ ಮತ್ತು ವಾಚ್ ಸಿಕ್ಕಿರುವುದಾಗಿ ತಿಳಿದುಬಂದಿದೆ.

ಘಟನೆ ಸಂಬಂಧ ರವಿಕುಮಾರ್ ಸಹೋದರ ಕುಮಾರಸ್ವಾಮಿ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದು ಸ್ಥಳಕ್ಕೆ ಸರ್ಕಲ್ ಇನ್ಸ ಪೆಕ್ಟರ್ ಬಿ.ಆರ್ ಪ್ರದೀಪ್ ಹಾಗೂ ಎಸ್ಐ ಲೋಕೇಶ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: