ಕರ್ನಾಟಕಪ್ರಮುಖ ಸುದ್ದಿ

ರಾಜ್ಯ ಬಜೆಟ್: ಮದ್ಯಪ್ರಿಯರಿಗೆ ಶಾಕ್; ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ ಘೋಷಣೆ

ಬೆಂಗಳೂರು,ಮಾ.5-ಈ ಬಾರಿಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮದ್ಯಪ್ರಿಯರಿಗೆ ಶಾಕ್ ನೀಡಿದ್ದಾರೆ.

ರಾಜ್ಯದ ಅಬಕಾರಿ ತೆರಿಗೆ ಸಂಗ್ರಹದ ಗುರಿಯನ್ನು ಹೆಚ್ಚಿಸಲಾಗಿದೆ. ಅಬಕಾರಿ ಇಲಾಖೆಗೆ 22,700 ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆಯ ಗುರಿ ನೀಡಲಾಗಿದೆ. ಅಂದರೆ, ರಾಜ್ಯದಲ್ಲಿ ಮದ್ಯದ ದರದಲ್ಲಿ ಶೇ.6ರಷ್ಟು ಏರಿಕೆಯಾಗಲಿದೆ ಎಂದರು.

ಈ ಮೊದಲೇ ರಾಜ್ಯ ಸರ್ಕಾರ ಅಬಕಾರಿ ಸುಂಕ ಏರಿಕೆ ಮಾಡಲಿರುವ ಕುರಿತು ನಿರೀಕ್ಷೆ ಮಾಡಲಾಗಿತ್ತು. ಅದರಂತೆಯೇ ಈಗ ಅಬಕಾರಿ ಸುಂಕ ಏರಿಸಲಾಗಿದ್ದು, ಏಪ್ರಿಲ್‌ 1 ರಿಂದಲೇ ಜಾರಿಗೆ ಬರಲಿದೆ.

ಬಿಎಸ್‌ವೈ ಸರ್ಕಾರ ಅಬಕಾರಿ ಸುಂಕದಲ್ಲಿ ಶೇ.10 ಹೆಚ್ಚಳ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ತೆರಿಗೆ ಸಂಗ್ರಹದ ಟಾರ್ಗೆಟ್‌ ಹೆಚ್ಚಿಸಲಾಗಿದೆ. ಒಟ್ಟಾರೆ, ಮದ್ಯದ ಬೆಲೆಯಲ್ಲಿ ಈಗಿರುವ ಬೆಲೆಗಿಂತ ಶೇ. 6ರಷ್ಟು ಹೆಚ್ಚಾಗಲಿದೆ.

ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ: ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕಾಗಿ 1.5 ಕೋಟಿ ರೂ. ವೆಚ್ಚದಲ್ಲಿ `ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ’ಜಾರಿಗೆ ಘೋಷಣೆ ಮಾಡಲಾಗಿದೆ. ಅಲ್ಲದೆ ಮಹಿಳಾ ಮೀನುಗಾರರ ಸಬಲೀಕರಣಕ್ಕಾಗಿಯೂ ಕೆಲವೊಂದ ಯೋಜನೆಗಳನ್ನು ಪ್ರಕಟಿಸಲಾಗಿದೆ. ಮೀನುಗಾರರಿಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಪ್ರಮುಖ ಅನುದಾನಗಳು ಹಾಗೂ ಯೋಜನೆಗಳ ವಿವರ ಇಲ್ಲಿದೆ.

`ಮಹಿಳಾ ಮೀನುಗಾರರ ಸಬಲೀಕರಣ’ ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ. ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ. ಮಂಗಳೂರು ತಾಲ್ಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ.

ಉಡುಪಿ ಜಿಲ್ಲೆಯ ಹೆಜಮಾಡಿಕೋಡಿಯಲ್ಲಿ ಪರಿಷ್ಕೃತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ. ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ., ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ ಐದು ಕೋಟಿ ರೂ., ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ., ಕೊಡೇರಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಎರಡು ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ.

ಮಕ್ಕಳ ಬ್ಯಾಗ್ ಹೊರೆ ತಪ್ಪಿಸಲು ಕ್ರಮ: ಇದೇ ಮೊದಲ ಬಾರಿಗೆ ಮಕ್ಕಳ ಬಜೆಟ್‌ ಮಂಡನೆ ಮಾಡಲಾಗಿದೆ. ಬಜೆಟ್ ನಲ್ಲಿ ಮಕ್ಕಳಿಗೂ ಆದ್ಯತೆ ನೀಡಿ ಪ್ರತಿ ತಿಂಗಳ ಎರಡು ಶನಿವಾರ ಮಕ್ಕಳು ಶಾಲೆಗೆ ಬ್ಯಾಗ್ ತರುವಂತಿಲ್ಲ ಎಂಬ ಹೊಸ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಶಾಲಾ ಮಕ್ಕಳ ಬ್ಯಾಗ್‌ ಹೊರೆಯನ್ನು ತಪ್ಪಿಸಲು ರಾಜ್ಯ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಈ ಯೋಜನೆಗೆ ಆದ್ಯತೆ ನೀಡಿದ್ದರು. ಇದಕ್ಕೆ ಬಜೆಟ್‌ನಲ್ಲಿ ಸಿಎಂ ಯಡಿಯೂರಪ್ಪ ಅನುಮೋದನೆ ನೀಡಿದ್ದಾರೆ. ರಾಜ್ಯದ ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರತಿ ಶನಿವಾರ ಬ್ಯಾಗ್‌ ರಹಿತ ದಿನವನ್ನಾಗಿ ಆಚರಿಸಲು ರಾಜ್ಯ ಸರ್ಕಾರ  ತೀರ್ಮಾನಿಸಿದೆ. ಪ್ರತಿ ತಿಂಗಳ ಎರಡು ಶನಿವಾರ ಸಂಭ್ರಮ ಶನಿವಾರ ಆಚರಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಪುಸ್ತಕಗಳ ಬದಲು ಶನಿವಾರ ಶಾಲೆಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತದೆ. ಶಿಕ್ಷಣ ಇಲಾಖೆ ರೂಪಿಸಿರುವ ಮಾರ್ಗಸೂಚಿಯನ್ವಯ ಪ್ರತಿ ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಇದರಿಂದ ಬ್ಯಾಗ್‌ ಹೊರೆ ತಪ್ಪುವ ಜತೆಗೆ ಮಕ್ಕಳಲ್ಲಿ ಪಠ್ಯದ ಚಟುವಟಿಕೆಗಳ ಜತೆಗೆ ಪಠ್ಯೇತರ ಚಟುವಟಿಕೆಯ ಮಹತ್ವದ ಅರಿವು ಮೂಡಿಸಲಾಗುತ್ತದೆ. ಅಲ್ಲದೆ, ಮಕ್ಕಳ ಹಾಜರಾತಿಯೂ ಹೆಚ್ಚಾಗಲಿದೆ. ಶಿಕ್ಷಕ ಮಿತ್ರ ಮೊಬೈಲ್ ಆ್ಯಪ್‌ ಬಿಡುಗಡೆ ಮಾಡುವ ಬಗ್ಗೆಯೂ ಯಡಿಯೂರಪ್ಪ ಬಜೆಟ್ ನಲ್ಲಿ ಮಂಡಿಸಿದರು. (ಎಂ.ಎನ್)

Leave a Reply

comments

Related Articles

error: