
ಬೆಂಗಳೂರು,ಮಾ.6-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆಯಷ್ಟೇ ರಾಜ್ಯ ಬಜೆಟ್ ಮಂಡಿಸಿದ್ದು, ಬಜೆಟ್ ನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ 500 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಕಿಂಗ್ ಸ್ಟಾರ್ ಯಶ್ ತಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ನಮ್ಮ ಉದ್ಯಮಕ್ಕೆ ಫಿಲ್ಮ್ ಸಿಟಿ ಅಗತ್ಯ ಇದೆ. ಚಿತ್ರರಂಗಕ್ಕೆ ಕ್ರಿಯಾಶೀಲ ಹಾಗೂ ಬರಹಗಾರರ ಅಗತ್ಯ ಇದೆ. ಈ ಯೋಜನೆ ಬೇಗ ಕಾರ್ಯರೂಪಕ್ಕೆ ಬರಲಿ. ಆದರೆ, ಫಿಲ್ಮ್ ಸಿಟಿ ಮೈಸೂರಿನಲ್ಲಿ ಆಗಿದ್ದರೆ ತುಂಬ ಚೆನ್ನಾಗಿ ಇತ್ತು. ಅಲ್ಲಿ ಟ್ರಾಫಿಕ್ಸ್ ಹಾಗೂ ಜನ ಸಂಖ್ಯೆ ಕಡಿಮೆ ಇತ್ತು. ಸಿನಿಮಾಗೆ ಪೂರಕವಾದ ವಾತಾವರಣ ಇತ್ತು. ಪರವಾಗಿಲ್ಲ ಎಲ್ಲಿ ಮಾಡಿದರೂ ಓಕೆ ಎಂದು ಯಶ್ ಹೇಳಿದ್ದಾರೆ.
ನಮ್ಮಲ್ಲಿ ವ್ಯವಸ್ಥೆ ಚೆನ್ನಾಗಿ ಇದ್ದರೆ ಸಿನಿಮಾ ಕಲಿಕೆಗೆ ಅವಕಾಶ ಸಿಗುತ್ತೆ. ದೊಡ್ಡದಾಗಿ ಯೋಚನೆ ಮಾಡಲು ಸಾಧ್ಯವಾಗುತ್ತೆ. ಇನ್ನು ಒಂದಿಷ್ಟು ವ್ಯವಸ್ಥೆ ಆಗಬೇಕು. ಮುಖ್ಯವಾಗಿ ಸಿನಿಮಾ ಎಜುಕೇಶನ್ ತರ ಆಗಬೇಕು. ಕ್ರಿಯೇಟಿವ್ ಇರೋರಿಗೆ ಸಿನಿಮಾ ಒಳ್ಳೆಯ ಉದ್ಯಮ. ಎಲ್ಲಾ ಚೆನ್ನಾಗಿ ಆಗಬೇಕು ಎಂದರೆ ಸರ್ಕಾರ ಕೈ ಜೋಡಿಸಬೇಕು. ಆದಷ್ಟು ಬೇಗ ಫಿಲ್ಮ್ ಸಿಟಿ ಕಾರ್ಯರೂಪಕ್ಕೆ ಬರಲಿ ಎಂದರು.
ಇತ್ತೀಚಿಗಷ್ಟೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಿ ಎಂದು ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಹೇಳಿದ ಯಶ್ ತಕ್ಷಣ ಮಾಡುತ್ತೇನೆ ಎಂದು ಮೊನ್ನೆಯಷ್ಟೆ ಸಿಎಂ ಹೇಳಿದ್ದರು. ಈ ಬಾರಿಯ ಬಜೆಟ್ ನಲ್ಲಿಯೇ ಮಾಡುತ್ತೇನೆ ಎಂದಿದ್ದರು. ಹಾಗೆ ಮಾಡಿದ್ದಾರೆ. (ಎಂ.ಎನ್)