ಪ್ರಮುಖ ಸುದ್ದಿ

ವಿದ್ಯಾರ್ಥಿಗಳು ಉತ್ತಮ ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು : ಉಪನ್ಯಾಸಕ ರಾಬಿನ್ ಸಲಹೆ

ರಾಜ್ಯ(ಮಡಿಕೇರಿ) ಮಾ.7 :- ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವಿದ್ಯಾರ್ಥಿಗಳು ಉತ್ತಮ ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು. ವೃತ್ತಿಯನ್ನು ಪಡೆಯುವ ಸಂದರ್ಭ ತಾವು ಪಡೆದ ಅಂಕದೊಂದಿಗೆ ತಮ್ಮ ಸಂವಹನ ಕಲೆಯೂ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಈಗಿನಿಂದಲೇ ಸಂವಹನದ ಕಡೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮಂಗಳೂರು ವಿಶ್ವ ವಿದ್ಯಾನಿಲಯ ಚಿಕ್ಕಅಳುವಾರ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರಾದ ರಾಬಿನ್ ಸಲಹೆ ನೀಡಿದ್ದಾರೆ.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವೃತ್ತಿ ಮತ್ತು ಉದ್ಯೋಗ ಕೋಶದ ವತಿಯಿಂದ ಸಂವಹನ ಕಲೆ ಹಾಗೂ ಪ್ರಸ್ತುತಿ ಕೌಶಲ್ಯ ವಿಷಯದ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಉತ್ತಮ ಸಂವಹನ ಕೌಶಲ್ಯದಿಂದ ಕೆಲಸವನ್ನು ಸುಲಭವಾಗಿ ಪಡೆದುಕೊಂಡು ಮನೆಗೆ ಒಳ್ಳೆಯ ಮಕ್ಕಳಾಗಿ, ದೇಶಕ್ಕೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು. ಸಂವಹನ ಕೇವಲ ಗೆಳೆಯರೊಂದಿಗೆ ಮಾತ್ರ ಸೀಮಿತವಾಗಿರದೆ ಪೋಷಕರೊಂದಿಗೆ ಉತ್ತಮ ಸಂವಹನವನ್ನು ಬೆಳೆಸಿಕೊಳ್ಳಬೇಕು ಎಂದರು.

ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಂಡು ಉತ್ತಮ ಮಾತುಗಾರನಾಗಿ ರೂಪುಗೊಳ್ಳಬೇಕು. ವೃತ್ತಿ ಜೀವನದ ಆರಂಭದಲ್ಲಿ ಎಲ್ಲರೂ ಯಾವುದೇ ಅನುಭವ ಇಲ್ಲದಿದ್ದರೂ ಉತ್ತಮ ಸಂವಹನ ಕಲೆ ಹಾಗೂ ಇತರೆ ಕೌಶಲ್ಯ ಇದ್ದರೆ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಒಳ್ಳೆಯ ಮಾತುಗಾರಿಕೆ ಜೊತೆಗೆ ತಾಳ್ಮೆ ಇರಬೇಕು. ಜ್ಞಾನ ಭಂಡಾರ ಉತ್ತಮ ಪಡಿಸಿಕೊಳ್ಳಬೇಕು. ಧೈರ್ಯವಾಗಿ ಮಾತನಾಡಬೇಕು. ತಪ್ಪನ್ನು ತಿದ್ದಿಕೊಂಡು ಮತ್ತೊಮ್ಮೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಸಂವಹನದಲ್ಲಿ ಮೊದಲು ಪೂರ್ವ ನಿಯೋಜನೆ ಮಾಡಿಕೊಳ್ಳಬೇಕು. ಮಾತನಾಡುವಾಗ ಸರಳ ಭಾಷೆ ಬಳಸಬೇಕೆಂದು ಸಲಹೆ ನೀಡಿದರು.

ಒಬ್ಬರೊಂದಿಗೆ ಮಾತನಾಡುವಾಗ ಏರು ಧ್ವನಿಯಲ್ಲಿ ಮಾತನಾಡಬಾರದು. ತಾವು ಕೇಳುಗರಾಗಿದ್ದಲ್ಲಿ ಒಬ್ಬರು ಮಾತನಾಡುವಾಗ ಅವರಿಗೆ ಹಾಗೂ ಅವರ ಸಮಯಕ್ಕೆ ಗೌರವವನ್ನು ನೀಡಬೇಕು. ಸಂದರ್ಭಕ್ಕೆ ತಕ್ಕಂತೆ ನಗುಮೊಗದಿಂದ ಸಂಬೋಧಿಸಬೇಕು. ಯಾವುದೇ ಭಯವಿಲ್ಲದೆ ಧೈರ್ಯವಾಗಿ ಮಾತನಾಡುವ ಗುಣ ಲಕ್ಷಣಗಳನ್ನು ಬೆಳಸಿಕೊಳ್ಳಬೇಕು ಎಂದರು.

ಮ್ಯಾಜಿಕ್ ಶಬ್ಧಗಳಾದ ಧನ್ಯವಾದಗಳು, ಕ್ಷಮಿಸಿ ಇವುಗಳನ್ನು ಸಮಯಕ್ಕೆ ಅನುಗುಣವಾಗಿ ಆದಷ್ಟು ಬಳಸಬೇಕು. ಮಾತನಾಡುವಾಗ ಮಧ್ಯೆ ಮಾತನಾಡಬಾರದು. ನಕರಾತ್ಮಕವಾಗಿ ಪ್ರತಿಕ್ರಿಯೆ ನೀಡಬಾರದು. ಒಬ್ಬ ಉತ್ತಮ ಮಾತುಗಾರನಾಗಲು ಭಾಷೆಯ ಮೇಲೆ ಹಿಡಿತ ಸಾಧಿಸುವುದು ಬಹುಮುಖ್ಯ ಎಂದು ಹೇಳಿದರು.

ಕಾಲೇಜಿನ ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಡಿ.ನಿರ್ಮಲಾ ಅವರು ಮಾತನಾಡಿ ದಿನದ ಶೇ.80 ರಷ್ಟು ಸಮಯವನ್ನು ಸಂವಹನದಲ್ಲಿ ಕಳೆಯುತ್ತೇವೆ. ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಗ್ನರಾಗಿದ್ದು, ನೇರ ಸಂವಹನದಿಂದ ದೂರ ಉಳಿದಿದ್ದಾರೆ. ಆದ್ದರಿಂದ ಮೊಬೈಲ್ ಬಳಕೆ ಕಡಿಮೆ ಮಾಡಿ ಉತ್ತಮ ಸಂವಹನ ಕಲೆ ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ ವೈ.ಚಿತ್ರಾ, ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: