ದೇಶಪ್ರಮುಖ ಸುದ್ದಿ

ಪುಲ್ವಾಮಾ ದಾಳಿ: ಬಾಂಬ್ ತಯಾರಿಕೆಗೆ ಅಮೆಜಾನ್ ನಿಂದ ಕೆಮಿಕಲ್ಸ್ ಖರೀದಿ!

ಶ್ರೀನಗರ,ಮಾ.7-ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್​ಐಎ) ಬಂಧಿಸಿದೆ.

ಶ್ರೀನಗರದ ವೈಜ್​ ಅಲ್​ ಇಸ್ಲಾಂ ಮತ್ತು ಪುಲ್ವಾಮದ ಮೊಹಮ್ಮದ್​ ಅಬ್ಬಾಸ್​ ರಾಥರ್ ಬಂಧಿತ ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐದು ಮಂದಿಯನ್ನು ಎನ್ಐಎ ಬಂಧಿಸಿದೆ.

ನಿನ್ನೆ ಬಂಧಿಸಲಾಗಿರುವ ಇಬ್ಬರು ಆರೋಪಿಗಳ ಪೈಕಿ ಓರ್ವ ದಾಳಿ ನಡೆಸಲು ಐಇಡಿ ಬಾಂಬ್​ ತಯಾರಿಕೆಗಾಗಿ ಆನ್​ಲೈನ್​ ಶಾಪಿಂಗ್​ನಿಂದ ರಾಸಾಯನಿಕಗಳನ್ನು ಖರೀದಿಸಿದ್ದಾಗಿ ಹೇಳಿದ್ದಾನೆ.

ಆರಂಭಿಕ ತನಿಖೆಯಲ್ಲಿ ಆರೋಪಿ ಇಸ್ಲಾಂ ಐಇಡಿ ಬಾಂಬ್​ ತಯಾರಿಕೆಗೆ ಅಮೇಜಾನ್​ ಆನ್​ಲೈನ್​ ಶಾಪಿಂಗ್​ನಿಂದ ರಾಸಾಯನಿಕಗಳು, ಬ್ಯಾಟರಿಗಳು ಮತ್ತು ಇತರೆ ಅವಶ್ಯಕ ವಸ್ತುಗಳನ್ನು ಕೊಂಡುಕೊಂಡಿದ್ದಾಗಿ ಹೇಳಿದ್ದಾನೆ. ಎಲ್ಲವನ್ನು ಪಾಕಿಸ್ತಾನದ ಜೈಷ್​ ಎ ಮೊಹಮ್ಮದ್​(ಜಿಇಎಂ) ಉಗ್ರ ಸಂಘಟನೆಯ ನಿರ್ದೇಶನದಂತೆಯೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಂಚಿನ ಭಾಗವಾಗಿ ವೈಯಕ್ತಿಕವಾಗಿಯೇ ಬಾಂಬ್​ ತಯಾರಿಕೆಯ ಎಲ್ಲ ವಸ್ತಗಳನ್ನು ಕೊಂಡು ಜೆಇಎಂ ಉಗ್ರರಿಗೆ ಆರೋಪಿ ಇಸ್ಲಾಂ ನೀಡಿದ್ದಾನೆ.

ಮತ್ತೋರ್ವ ಆರೋಪಿ ರಾಥರ್​, ಜೆಇಎಂ ಸಂಘಟನೆಯ ಹಳೆಯ ಭೂಗತ ಕೆಲಸಗಾರ. ಜೈಷ್​ ಉಗ್ರರು ಹಾಗೂ ಐಇಡಿ ಪರಿಣಿತ ಮೊಹದ್​ ಉಮರ್​ 2018ರ ಏಪ್ರಿಲ್-ಮೇ​ನಲ್ಲಿ ಕಾಶ್ಮೀರಕ್ಕೆ ಬಂದಿದ್ದಾಗ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಇಷ್ಟೇ ಅಲ್ಲದೆ, ಜೈಷ್​ ಇತರೆ ಉಗ್ರರಾದ ಆತ್ಮಾಹುತಿ ಬಾಂಬ್​ ದಾಳಿಕೋರ ಆದಿಲ್​ ಅಹ್ಮದ್​ ದಾರ್, ಸಮೀರ್​ ಅಹ್ಮದ್​ ದಾರ್​ ಮತ್ತು ಕಮ್ರಾನ್​ ಉಗ್ರರಿಗೆ ಪುಲ್ವಾಮ ದಾಳಿಗೂ ಮುನ್ನ ಆಶ್ರಯ ನೀಡಿದ್ದ. ಹೀಗೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರೋಪಿಗಳಾದ ಇಸ್ಲಾಂ ಮತ್ತು ರಾಥರ್​ನನ್ನು ಶನಿವಾರ ಜಮ್ಮುವಿನಲ್ಲಿರುವ ಎನ್​ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: