ದೇಶಪ್ರಮುಖ ಸುದ್ದಿ

ವಂಚನೆಯಲ್ಲಿ ಐಸಿಐಸಿಐ ಬ್ಯಾಂಕ್ ನಂಬರ್ 1 ; ಎಸ್‍ಬಿಐಗೆ 2ನೇ ಸ್ಥಾನ !

ನವದೆಹಲಿ: ನೋಟು ನಿಷೇಧ ಮಾಡಿದ ಬಳಿಕ ಕಪ್ಪುಹಣವನ್ನು ಬಿಳಿಯಾಗಿಸಿಕೊಳ್ಳುವ ಕಾಳಧನಿಕರಿಗೆ ದೇಶದ ವಿವಿಧ ಬ್ಯಾಂಕುಗಳು ನೆರವು ನೀಡಿದ್ದು, ಈ ಪೈಕಿ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಐಸಿಐಸಿಐ ಅಗ್ರ ಸ್ಥಾನದಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿ ತಿಳಿಸಿದೆ.

ಆರ್‍ಬಿಐ ಸೋಮವಾರ ಈ ವರದಿ ಬಿಡುಗಡೆ ಮಾಡಿದ್ದು, 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ ನಂತರ ದೇಶದ ವಿವಿಧ ಬ್ಯಾಂಕ್‍ಗಳಲ್ಲಿ ನಡೆದ ವಂಚನೆ ಪಟ್ಟಿಯಲ್ಲಿ ಐಸಿಐಸಿಐ ಮೊದಲ ಸ್ಥಾನದಲ್ಲಿದೆ ಎಂದು ಆರ್‍ಬಿಐ ತಿಳಿಸಿದೆ.

ಕಳೆದ ಏಪ್ರಿಲ್ ತಿಂಗಳಿನಿಂದ ಡಿಸೆಂಬರ್ 9ರ ನಡುವಿನ ಅವಧಿಯಲ್ಲಿ ವಿವಿಧ ಬ್ಯಾಂಕ್‍ಗಳಲ್ಲಿ ನಡೆದಿರುವ ವಂಚನೆಗಳ ಆಧಾರದ ಮೇಲೆ ಐಸಿಐಸಿಐ ಬ್ಯಾಂಕ್‍ನಲ್ಲಿ ಅತಿಹೆಚ್ಚು ಅಂದರೆ 455 ವಂಚನೆ ಪ್ರಕರಣಗಳು ನಡೆದಿದೆ ಎಂದು ಆರ್‍ಬಿಐ ತಿಳಿಸಿದೆ. ಸ್ಟ್ಯಾಂಡರ್ಡ್ ಚಾರ್ಟೆಡ್ (244 ಪ್ರಕರಣ), ಎಚ್‍ಡಿಎಫ್‍ಸಿ (237ಪ್ರಕರಣ), ಎಕ್ಸಿಸ್ ಬ್ಯಾಂಕ್ (189 ಪ್ರಕರಣ), ಬ್ಯಾಂಕ್ ಆಫ್ ಬರೋಡಾ (176ಪ್ರಕರಣ) ಹಾಗೂ ಸಿಟಿ ಬ್ಯಾಂಕ್  (150 ಪ್ರಕರಣ) ವಂಚನೆ ಪಟ್ಟಿಯ ನಂತರದ ಸ್ಥಾನಗಳಲ್ಲಿದೆ.

ಎಸ್ ಬಿಐಗೆ 2ನೇ ಸ್ಥಾನ!

ಆರ್‍ಬಿಐ ಬಿಡುಗಡೆ ಮಾಡಿರುವ ಬ್ಯಾಂಕುಗಳ ವಂಚನೆ ಪಟ್ಟಿಯಲ್ಲಿ ಸರ್ಕಾರಿ ಸ್ವಾಮ್ಯದ ಎಸ್‍ಬಿಐ ಕೂಡ ಮುಂದಿದ್ದು, ಎಸ್‍ಬಿಐನಲ್ಲಿ ಒಟ್ಟು 429 ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಎಸ್‍ಬಿಐ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಹಣದ ವಂಚನೆಯಲ್ಲಿ ಎಸ್‍ಬಿಐ ಕೂಡ ಹಿಂದೆ ಬಿದ್ದಿಲ್ಲ ಎಂಬುದನ್ನು ಸಾಬೀತು ಮಾಡಿದೆ. ಎಸ್ ಬಿಐ ಈವರೆಗೂ 2,236.81 ಕೋಟಿ ಗಳಿಗೂ ಹೆಚ್ಚು ವಂಚಿಸಿದೆ ಎಂದು ಆರ್‍ಬಿಐ ಮೂಲಗಳು ತಿಳಿಸಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ (2,250.34 ಕೋಟಿ), ಆ್ಯಕ್ಸಿಸ್ (1,998.49 ಕೋಟಿ) ನಂತರದ ಸ್ಥಾನದಲ್ಲಿವೆ.

ಏಪ್ರಿಲ್ ನಿಂದ ಡಿಸೆಂಬರ್ ಒಳಗಿನ ಈ ವಂಚನೆ ಪ್ರಕರಣಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‍ಗಳು ಸೇರಿದಂತೆ ಒಟ್ಟು 450 ಸಿಬ್ಬಂದಿಗಳು ಶಾಮೀಲಾಗಿದ್ದು, ಇವುಗಳಲ್ಲಿ 3,870 ಕೇಸ್‍ಗಳಲ್ಲಿ 17,750.27 ಕೋಟಿ  ರು.ಗಳನ್ನು ವಂಚಿಸಿದ್ದಾರೆ ಎಂದು ಆರ್‍ಬಿಐ ಮೂಲಗಳು ತಿಳಿಸಿವೆ.

(ಎನ್‍.ಬಿ.ಎನ್)

Leave a Reply

comments

Related Articles

error: