ಪ್ರಮುಖ ಸುದ್ದಿಮೈಸೂರು

ಕೃಷಿ ಸಚಿವರೇ ನಾಲಿಗೆ ಇದೆ ಅಂತ  ತೆವಲಿಗೆ ಮಾತನಾಡಬೇಡಿ ಸುಮ್ಮನೆ ಸುಳ್ಳು ಹೇಳಿಕೊಂಡು ಓಡಾಡಬೇಡಿ : ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಮಾಜಿ ಸಿಎಂ ಹೆಚ್.ಡಿಕೆ ವಾಗ್ದಾಳಿ

ಮೈಸೂರು,ಮಾ.8:-  ಸಾಲಮನ್ನಾ ಕುರಿತು ಹೇಳಿಕೆ ನೀಡಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕೃಷಿ ಸಚಿವರೇ ನಾಲಿಗೆ ಇದೆ ಅಂತ  ತೆವಲಿಗೆ ಮಾತನಾಡಬೇಡಿ. ಸುಮ್ಮನೆ ಸುಳ್ಳು ಹೇಳಿಕೊಂಡು ಓಡಾಡಬೇಡಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ವಿರುದ್ದ  ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಎಚ್.ಡಿ. ಕುಮಾರಸ್ವಾಮಿ ಬರೀ ಸಾಲಮನ್ನಾ ಘೋಷಣೆ ಮಾಡಿಹೋದ್ರೆ ಹೊರತು ಅದಕ್ಕಾಗಿ ಸೂಕ್ತ ರೂಪು ರೇಷೆ ಸಿದ್ಧಪಡಿಸಲಿಲ್ಲ. ಬಾಯಿಗೆ ಬಂದಂತೆ ಘೋಷಣೆ ಮಾಡಿ ಹೋಗುವುದು ದೊಡ್ಡ ವಿಷಯವೇನಲ್ಲ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದರು.

ಈ ಕುರಿತು ಇಂದು ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆ ಯಪ್ಪನಿಗೆ ಸಾಲ ಮನ್ನಾದ ಬಗ್ಗೆ ಮಾಹಿತಿಯೇ ಇಲ್ಲ. ಸಾಲಮನ್ನಾದ ಬಗ್ಗೆ ಆ ಕೃಷಿ ಸಚಿವರಿಗೆ ವಿಷಯವೇ ಗೊತ್ತಿಲ್ಲ ಅನ್ಸತ್ತೆ. ನಾನು ಅಧಿಕಾರದಿಂದ ಇಳಿಯುವಾಗ ಬರಿ ಘೋಷಣೆ ಮಾಡಿಲ್ಲ.  ಬದಲಿಗೆ 25 ಸಾವಿರ ಕೋಟಿ ಹಣ ಹೊಂದಿಸಿ ಅಧಿಕಾರದಿಂದ ಇಳಿದಿದ್ದೇನೆ. ನಾನು ಹೊಂದಿಸಿಕೊಟ್ಟಿದ್ದ 800 ಕೋಟಿ ಹಣವನ್ನು ಇನ್ನು ಬಿಡುಗಡೆ ಮಾಡದೆ ಹಾಗೆಯೇ ಇಟ್ಟುಕೊಂಡಿದ್ದಾರೆ. ನಾವು ರೈತರಿಂದ ಸರಳ ದಾಖಲೆ ಕೇಳಿದ್ವಿ. ರೈತರ ದಾಖಲೆ ತಪ್ಪಿದ್ದರೆ ಸರಿಪಡಿಸೋದು ಇಲಾಖೆ ಕೆಲಸ.  ಅದನ್ನು  ಬಿಟ್ಟು  ತೆವಲಿಗೆ ಮಾತನಾಡೋದು, ಸುಳ್ಳು ಹೇಳಿಕೊಂಡು ಓಡಾಡೋದು ಬೇಡ ಎಂದು ಸಚಿವ ಬಿ.ಸಿ ಪಾಟೀಲ್ ಗೆ ಟಾಂಗ್ ಕೊಟ್ಟರು.

ಬಿಜೆಪಿಯಿಂದ ಶಾದಿಭಾಗ್ಯ ಯೋಜನೆಗೆ ತಿಲಾಂಜಲಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು  ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೇ ಅಲ್ಲ ರಾಜ್ಯದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನ ಸ್ಥಗಿತ ಮಾಡಿದೆ.‌ ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ನನ್ನ ಕ್ಷೇತ್ರ ಅನುದಾನ ಬಂದಿಲ್ಲ ಅಂತ ಗಲಾಟೆ ಮಾಡಿದ್ದಾರೆ. ಅದು ಸಹ ಮಂತ್ರಿಯನ್ನು ಕೂರಿಸಿಕೊಂಡು ಅನುದಾನ ಕೊಡಿ ಅಂತ ಕೇಳಿದ್ದಾರೆ. ಸಿಎಂ ನೆರೆ ಹಾವಳಿಯ ಜನರಿಗೆ ಹಣ ಬಿಡುಗಡೆ ಮಾಡಿ ಅಂತ ಹೇಳಿದ್ದಾರೆ. ಆದರೂ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಅಂತ ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಇದು ಸದ್ಯದ ಬಿಜೆಪಿ ಸರ್ಕಾರದ ಸ್ಥಿತಿ ಎಂದು ಟೀಕಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: