ಮೈಸೂರು

ಸಮಾನತೆ ಸಿಗಬೇಕೆನ್ನುವುದು ಕುವೆಂಪು ಆಶಯವಾಗಿತ್ತು : ಡಾ.ಕೆ.ಎಂ.ಗೋವಿಂದೇಗೌಡ ಬಣ್ಣನೆ

ಸಮಾಜದಲ್ಲಿರುವ ಎಲ್ಲರಿಗೂ ಸಮಾನತೆ ಸಿಗಬೇಕು. ಅಸಮಾನತೆಯನ್ನು ತೊಡೆದು ಹಾಕಿ ಪ್ರತಿಭೆಗೆ ಮನ್ನಣೆ ನೀಡಬೇಕು ಎನ್ನುವುದು ಕುವೆಂಪು ಅವರ ಆಶಯವಾಗಿತ್ತು ಎಂದು ಮೈಸೂರು ವೈದ್ಯಕೀಯ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಎಂ.ಗೋವಿಂದೇಗೌಡ ತಿಳಿಸಿದರು.

ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಉಪನ್ಯಾಸ ಮಂದಿರದಲ್ಲಿ ಕುವೆಂಪು ಅವರ ಶೂದ್ರ ತಪಸ್ವಿ ಕುರಿತು ನಡೆದ ವಿಶೇಷ ಉಪನ್ಯಾಸ ಮಾಲೆಯಲ್ಲಿ ಉಪನ್ಯಾಸವನ್ನು ನೀಡಿದರು.  ಸಮಾಜದಲ್ಲಿರುವ ವರ್ಣಭೇದವನ್ನು ಹೋಗಲಾಡಿಸುವ ಸಲುವಾಗಿ ಕುವೆಂಪುರವರು ಶೂದ್ರ ತಪಸ್ವಿ ಎನ್ನುವ ಅದ್ಭುತ ನಾಟಕವಾಡಿಸಿದರು. ಸಮಾಜದಲ್ಲಿರುವ ಅಸಮಾನತೆಯನ್ನು ನಾಟಕ ಪ್ರತಿಬಿಂಬಿಸಿತು. ಈ ನಾಟಕವನ್ನು ಹೃದಯಮುಟ್ಟುವಂತೆ ಬರೆದಿದ್ದಾರೆ. ನಾಟಕ ಅತ್ಯಂತ ಹೆಸರನ್ನು ಮಾಡಿ ಕ್ರಾಂತಿಯನ್ನುಂಟು ಮಾಡಿತು. ಕುವೆಂಪುರಂತಹ ಕವಿ ಈ ಯುಗದಲ್ಲಿ ಮತ್ತೆ ಹುಟ್ಟಲ್ಲ. 21ನೇ ಶತಮಾನದಲ್ಲಿ ಅಂತಹ ಕವಿಗಳನ್ನು ಕೇವಲ ಭಾವಚಿತ್ರಗಳಲ್ಲಿ ನೋಡಲು ಸಾಧ್ಯ. ಆಡುಮುಟ್ಟದ ಸೊಪ್ಪಿಲ್ಲ. ಕುವೆಂಪು ತಿಳಿಯದ ವಿಷಯವಿಲ್ಲ  ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶಿವಲಿಂಗೇಗೌಡ, ಬಿ.ಚಂದ್ರಶೇಖರ್, ಎಸ್.ಮರಿಗೌಡ ಮತ್ತಿತರರು ಉಪಸ್ಥಿತರಿದ್ದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: