ಪ್ರಮುಖ ಸುದ್ದಿ

ಐದು ಪುಸ್ತಕಗಳ ಲೋಕಾರ್ಪಣೆ : ಪ್ರತಿಭೆ ಅನಾವರಣಕ್ಕೆ ಅವಕಾಶಗಳು ಅಗತ್ಯ : ಮಾಜಿ ಸಚಿವ ಎಂ.ಸಿ.ನಾಣಯ್ಯ ಅಭಿಮತ

ರಾಜ್ಯ(ಮಡಿಕೇರಿ) ಮಾ.9 :- ಕೊಡವ ಮಕ್ಕಡ ಕೂಟ, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ವಿರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಐದು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ನಗರದ ಪತ್ರಿಕಾಭವನದಲ್ಲಿ ನಡೆಯಿತು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಚರಣಿಯಂಡ ಪಿ.ಅಪ್ಪಣ್ಣ ಹಾಗೂ ಬಾಚರಣಿಯಂಡ ರಾಣು ಅಪ್ಪಣ್ಣ ಬರೆದಿರುವ ಪಾಂಚಜನ್ಯ ಹಾಗೂ ಆಂಜ ಮುತ್ತ್, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪರ ವೀರಚಕ್ರ ಹಾಗೂ ಮೋಹ ಪಾಶ, ಮೂಕೋಂಡ ನಿತಿನ್ ಕುಶಾಲಪ್ಪ, ಐತಿಚಂಡ ರಮೇಶ್ ಉತ್ತಪ್ಪ ಬರೆದಿರುವ ಕೊಡಗಿನ ಗಾಂಧಿ ಪಂದ್ಯಂಡ ಬೆಳ್ಯಪ್ಪ ಎಂಬ ಕನ್ನಡ ಪುಸ್ತಕವನ್ನು ಇಂಗ್ಲೀಷ್‍ಗೆ (ದಿ ಗಾಂಧಿ ಆಫ್ ಕೊಡಗು) ಅನುವಾದ ಮಾಡಿರುವ ಪುಸ್ತಕ ಲೋಕಾರ್ಪಣೆಗೊಂಡಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಮೇರಿಯಂಡ ಸಿ.ನಾಣಯ್ಯ ಮಾತನಾಡಿ, ಬುದ್ದಿವಂತಿಕೆ ಯಾರ ಗುತ್ತಿಗೆಯೂ ಅಲ್ಲ, ಎಲ್ಲರಲ್ಲೂ ಪ್ರತಿಭೆ ಇರುತ್ತದೆ, ಆದರೆ ಕೆಲವರು ಅವಕಾಶದಿಂದ ವಂಚಿತರಾಗುತ್ತಾರೆ. ಪ್ರತಿಭೆಗಳ ಅನಾವರಣಕ್ಕೆ ಅವಕಾಶಗಳ ಅಗತ್ಯವಿದೆ ಎಂದು ಹೇಳಿದರು.

ಕೊಡವ ಭಾಷೆಯ ಬಗ್ಗೆ ಎಲ್ಲರಿಗೂ ಅಭಿಮಾನವಿದೆ, ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮ ನಡೆಸಿದೆ. ಉತ್ತಮ ಕೆಲಸಗಳು ಮಾಡುವಾಗ ಅಡೆತಡೆಗಳು ಉಂಟಾಗುತ್ತಲೇ ಇರುತ್ತದೆ. ಇದಾವುದನ್ನು ಲೆಕ್ಕಿಸದೇ ಪ್ರತಿಯೊಬ್ಬರು ಮುನ್ನುಗ್ಗಬೇಕು ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರೋ. ಕೋಡಿರ ಲೋಕೇಶ್ ಮೊಣ್ಣಪ್ಪ ಮಾತನಾಡಿ, ಹಿಂದೆ ಕೊಡಗಿನಲ್ಲಿ ಸಾಹಿತ್ಯದ ಚಟುವಟಿಕೆ ಬರಡು ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಇಂದು ಕೊಡಗಿನಲ್ಲಿಯೂ ಸಾಹಿತ್ಯ ಕೃಷಿ ಉತ್ತಮವಾಗಿದೆ. ಇತಿಹಾಸದ ಘಟನೆಗಳನ್ನು ಪುಸ್ತಕ ರೂಪದಲ್ಲಿ ದಾಖಲಿಸುತ್ತಾ ಹೋದಾಗ ನಮ್ಮ ಚರಿತ್ರೆಯೂ ಉಳಿಯುತ್ತದೆ ಎಂದರು.

ಮಡಿಕೇರಿ ಕೊಡವ ಸಮಾಜದ ಮಾಜಿ ಉಪಾಧ್ಯಕ್ಷ ಹಾಗೂ ಕೂರ್ಗ್ ಎಜುಕೇಷನ್ ಟ್ರಸ್ಟ್ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್  ಹಾಸ್ಪಿಟಲಿಟಿ ಸೈನ್ಸ್‍ನ ಅಧ್ಯಕ್ಷ ಮಂಡೇಪಂಡ ರತನ್ ಕುಟ್ಟಯ್ಯ ಮಾತನಾಡಿ,  ಬೊಳ್ಳಜಿರ ಬಿ ಅಯ್ಯಪ್ಪ ಉತ್ತಮ ಕಾರ್ಯ ಮಾಡಿದ್ದು, ಹಲವು ಮಕ್ಕಳಿಗೆ ಆಟ್ ಪಾಟ್ ಶಿಬಿರ ಸೇರಿ ನಾನಾ ಕಾರ್ಯಕ್ರಮ ಮಾಡಿರುವುದು ಶ್ಲಾಘನಾರ್ಹ ಎಂದರು.

ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಕೊಡವರು ಮತ್ತು ಕೋವಿ ಎಂಬ ಕವನವನ್ನು ಓದಿ, ಕೊಡವರ ಇತಿಹಾಸದ ಬಗ್ಗೆ ಮಾತನಾಡಿದರು.

ಬರಹಗಾರ, ನಿರ್ದೇಶಕ, ನಿರ್ಮಾಪಕ, ನಟ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಮಕ್ಕಡ ಕೂಟದ ಅಧ್ಯಕ್ಷ ಅಯ್ಯಪ್ಪನಂತಹ ಪ್ರತಿಭೆಗಳ ಅಗತ್ಯ ನಮ್ಮ ಸಮಾಜಕ್ಕೆ ಇದೆ. ನಾವು ಸಾಧನೆಯ ಹಾದಿಯಲ್ಲಿ ಮುನ್ನುಗುತ್ತಿದ್ದರೆ, ಸಮಾಜವೂ ನಮ್ಮ ಜೊತೆಗಿರುತ್ತದೆ ಎಂದರು.

ಬರಹಗಾರ ಮೂಕೋಂಡ ನಿತಿನ್ ಕುಶಾಲಪ್ಪ ಮಾತನಾಡಿದರು.

ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದ ವತಿಯಿಂದ ಕಳೆದ ಏಳು ವರ್ಷಗಳಿಂದ ಮಕ್ಕಳಿಗಾಗಿ ಆಟ್‍ಪಾಟ್ ಪಡಿಪು ಕಾರ್ಯಕ್ರಮ, 5 ವರ್ಷದಿಂದ ಮಕ್ಕಳಿಗಾಗಿ ಮಕ್ಕಡ ನಮ್ಮೆ, ಹಲವು ಯುವ ಸಾಧಕರಿಗೆ ಸನ್ಮಾನ ಸೇರಿದಂತೆ ಇನ್ನೂ ಹಲವು ಕಾರ್ಯಕ್ರಮಗಳನ್ನು ಮಾಡುದರ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡಿದೆ. ಈವರೆಗೆ 41 ಪುಸ್ತಕ ಬಿಡುಗಡೆ ಮಾಡಿದ್ದು, ಇದರಲ್ಲಿ 20 ಕೊಡವ ಭಾಷೆಯ ಪುಸ್ತಕ, 15 ಕನ್ನಡ ಭಾಷೆಯ ಪುಸ್ತಕ, 5 ಇಂಗ್ಲೀóಷ್ ಹಾಗೂ ಹಿಂದಿ ಭಾಷೆಯಲ್ಲಿ 1 ಪುಸ್ತಕವನ್ನು ಬಿಡುಗಡೆ ಮಾಡಿರುತ್ತಾರೆ ಎಂದರು.

ಈ 41 ಪುಸ್ತಕದಲ್ಲಿ ಹಲವು ಪುಸ್ತಕಗಳು ದಾಖಲೆ ಸಾಹಿತ್ಯ ಪುಸ್ತಕಗಳಾಗಿದ್ದು, ಹಲವು ಸಾಧಕರನ್ನು ಗುರುತಿಸುವಂತಹ ಪುಸ್ತಕಗಳನ್ನು ಸಹ ಒಳಪಟ್ಟಿದೆ. ಕೊಡವರ ಇತಿಹಾಸ, ಕೊಡಗಿನ ಇತಿಹಾಸ, ಸಾಧಕರ ಪುಸ್ತಕ, ಇನ್ನಿತರ ಪುಸ್ತಕಗಳನ್ನು ಕನ್ನಡ, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಪ್ರಕಟ ಪಡಿಸಿದ್ದು, ಇದರಿಂದ ಸಾಧಕರ ಮಾಹಿತಿಯೂ ರಾಜ್ಯ ಹಾಗೂ ದೇಶ ಮಟ್ಟಕ್ಕೆ ತಿಳಿಸುವಂತಹ ಕಾರ್ಯ ಮಾಡಿದೆ ಎಂದರು.

ಸಾಹಿತಿ ಹಾಗೂ ವಿರಾಜಪೇಟೆ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಮಕ್ಕಡ ಕೂಟದ ಉಪಾಧ್ಯಕ್ಷ ಬಾಳೆಯಡ ಪ್ರತೀಶ್ ಪೂವಯ್ಯ, ಪೊಮ್ಮಕ್ಕಡ ಕೂಟದ ಪದಾಧಿಕಾರಿಗಳು, ಮಕ್ಕಡ ಕೂಟದ ಪದಾಧಿಕಾರಿಗಳು ಹಾಜರಿದ್ದರು. ಬೊಟ್ಟೋಳಂಡ ನಿವ್ಯ ದೇವಯ್ಯ ಪ್ರಾರ್ಥಿಸಿದರು. ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: