ಪ್ರಮುಖ ಸುದ್ದಿಮೈಸೂರು

ಹೋಳಿ ಹಬ್ಬ ಆಚರಣೆಗೂ ಕೊರೋನಾ ಎಫೆಕ್ಟ್ : ಮೈಸೂರಿನ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರಿಂದ ಹೋಳಿ ಆಚರಣೆ

ಮೈಸೂರು/ನವದೆಹಲಿ,ಮಾ.9:- ಹೋಳಿ ಹುಣ್ಣಿಮೆ, ಹೋಲಿಕಾ ದಹನ ಇದು ಉತ್ತರಭಾರತದಲ್ಲಿ ಹೆಚ್ಚು ಆಚರಣೆಯಲ್ಲಿರುವ ಹಬ್ಬವಾಗಿದ್ದು, ಇತ್ತೀಚೆಗೆ ಅದೊಂದು ಫ್ಯಾಷನ್ ಆಗಿ ದಕ್ಷಿಣ ಭಾರತದವರೆಗೂ ವಿಸ್ತರಿಸಿಕೊಂಡಿದೆ.

ಈ ಬಾರಿ ಕೊರೊನಾ ವೈರಸ್ ಮಹಾಮಾರಿ ಎಫೆಕ್ಟ್ ನಿಂದಾಗಿ ಉತ್ತರಭಾರತದಲ್ಲಿ ಜನತೆ ಹೋಳಿ ಆಚರಣೆಯನ್ನು ಕೈಬಿಟ್ಟಿದ್ದಾರೆ. ಇಂದು ಬಣ್ಣಗಳ ಹಬ್ಬ ಹೋಳಿ ಹಬ್ಬವಾಗಿದ್ದು, ಮಕ್ಕಳಿಂದ ಮುದುಕರವರೆಗೂ ಬಣ್ಣದ ಓಕುಳಿಯಾಟವನಾಡಿ, ಪರಸ್ಪರ ಒಬ್ಬರ ಮೇಲೆ ಒಬ್ಬರು ಬಣ್ಣವನ್ನು ಎರಚಿ ಸಂಭ್ರಮಿಸುತ್ತಿದ್ದರು.  ಆದರೆ ಕೊರೊನಾ ವೈರಸ್ ನ ಭೀತಿಯಿಂದಾಗಿ ಬಣ್ಣಗಳ ಹಬ್ಬದ ಕುರಿತು ಯಾರೂ ಉತ್ಸುಕರಾಗಿಲ್ಲ. ದೇಶದಲ್ಲಿ ಕೊರೋನಾ ವೈರಸ್   ಪ್ರಕರಣಗಳ ಕುರಿತು ವರದಿಯಾದಾಗ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ರೋಗದ ಅಪಾಯದ ಬಗ್ಗೆ ಭಯಭೀತರಾಗಿದ್ದಾರೆ.

ಹೋಳಿ ಹಬ್ಬವು ವಸಂತಕಾಲದ ಸಂಕೇತವಾಗಿದೆ. ಇದನ್ನು ಬಣ್ಣಗಳ ಹಬ್ಬ ಎಂದೂ ಕರೆಯುತ್ತಾರೆ.  ಇದನ್ನು ಹೋಲಿಕಾ ದಹನ್ ಎಂದೂ ಕರೆಯುತ್ತಾರೆ.  ಈ ಹಬ್ಬವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಬರಲಿದ್ದು,   ವಸಂತಕಾಲದ ಆಗಮನ ಮತ್ತು ಚಳಿಗಾಲದ ನಿರ್ಗಮನವನ್ನು ಸೂಚಿಸುತ್ತದೆ. ಹೋಳಿ ಸಂದರ್ಭದಲ್ಲಿ   ನಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುತ್ತೇವೆ, ಅವರಿಗೆ ಬಣ್ಣ ಹಚ್ಚುತ್ತೇವೆ. ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಿ ಆನಂದಿಸುತ್ತೇವೆ.

ಮೈಸೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿಗಳು ಇಂದು ಪರಸ್ಪರ ಸ್ನೇಹಿತೆಯರಿಗೆ ಬಣ್ಣಗಳನ್ನು ಹಚ್ಚುವ ಮೂಲಕ ಹೋಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.

ಇಂದು ಸಂಜೆ 6ಗಂಟೆ 26ನಿಮಿಷದಿಂದ 8ಗಂಟೆ 52ನಿಮಿಷದವರೆಗೆ ಹೋಲಿಕಾ ದಹನಕ್ಕೆ ಕಾಲ ಪ್ರಶಸ್ತವಾಗಿದೆ ಎನ್ನಲಾಗುತ್ತಿದೆ.

ಭಕ್ತ ಪ್ರಹ್ಲಾದ ಮತ್ತವರ ತಂದೆ ಹಿರಣ್ಯಕಶಿಪುವಿನ ಕಥೆ ಇದರ ಹಿಂದಿದೆ ಎಂದು ಪುರಾಣಗಳು ತಿಳಿಸುತ್ತವೆ.  ಹಿರಣ್ಯಕಶಿಪು ಓರ್ವ ಪ್ರಬಲ ಮತ್ತು ಸೊಕ್ಕಿನ ರಾಜನಾಗಿದ್ದ. ಅವನು ತನ್ನನ್ನು ತಾನೇ ದೇವರು ಎಂದುಕೊಂಡಿದ್ದನಲ್ಲದೇ ಪ್ರಜೆಗಳೂ ಅವನನ್ನು ದೇವರೆಂದು ಆರಾಧಿಸಬೇಕೆಂದು ಬಯಸಿದ್ದ.   ಎಲ್ಲರೂ ಇದನ್ನು ಪಾಲಿಸಿದರಾದರೂ ಆತನ ಮಗ ಪ್ರಹ್ಲಾದ ಮಾತ್ರ ವಿಷ್ಣುವನ್ನು ತನ್ನ ದೇವರೆಂದು ಪೂಜಿಸತೊಡಗಿದ್ದ.    ತಂದೆ ಎಷ್ಟು ಹೇಳಿದರೂ ಅವರ ಆದೇಶವನ್ನು ಮಗ ಪಾಲಿಸಲಿಲ್ಲ. ಇದರಿಂದ ಕೋಪಗೊಂಡ ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನಿಗೆ ಅನೇಕ ಶಿಕ್ಷೆಗಳನ್ನು ನೀಡಿದ. ಆದರೆ ಆ ಶಿಕ್ಷೆಗಳು ಅವನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.  ಇದರ ನಂತರ ಹಿರಣ್ಯಕಶಿಪು ಸಹೋದರಿ ಹೋಲಿಕಾ ಜೊತೆ ಪೈರಿನ ಮೇಲೆ ಕುಳಿತುಕೊಳ್ಳುವ ಯೋಜನೆಯನ್ನು ರೂಪಿಸಿದ್ದ.  ಹೋಲಿಕಾ ಬೆಂಕಿ ತಾಗಿದರೂ ಏನು ಆಗದೇ ಇರುವಂತಹ ಒಂದು ಅದ್ಭುತವಾದ ಬಟ್ಟೆಯನ್ನು ಹೊಂದಿದ್ದಳು.  ಅದು ಅವಳನ್ನು ಮುಚ್ಚಿದ ನಂತರ ಬೆಂಕಿಯಲ್ಲಿ ಯಾವುದೇ ಹಾನಿ ಆಕೆಗೆ ಆಗದು ಎಂಬ ಭಾವನೆ ಅವರಲ್ಲಿತ್ತು. ಆದರೆ ಬೆಂಕಿ ಹಾಕಿದಾಗ ಆ ಬಟ್ಟೆ ಪ್ರಹ್ಲಾದನ ಮೇಲೆ ಹಾರಿ ಹೋಗಿ ಬಿದ್ದಿದ್ದು, ಹೋಲಿಕಾ ಬೆಂಕಿಯಲ್ಲಿ ದಹನವಾದಳು. ಪ್ರಹ್ಲಾದನ ಜೀವ ಉಳಿಯಿತು. ಅದಕ್ಕಾಗಿಯೇ ಹೋಳಿ ಹಬ್ಬವನ್ನು ಕೆಡುಕಿನ ಮೇಲಿನ ವಿಜಯ ಸಾಧಿಸುವ ಸಂಕೇತವಾಗಿ ಆಚರಿಸಲಾಗುತ್ತದೆ ಎಂದು ಪುರಾಣಗಳು ತಿಳಿಸುತ್ತವೆ.  (ಎಸ್.ಎಚ್)

 

 

Leave a Reply

comments

Related Articles

error: