ಮೈಸೂರು

ನಗರ ಬಸ್ ನಿಲ್ದಾಣದ ಬಳಿ ಸಬ್ ವೇ ನಿರ್ಮಾಣ: ಸ್ಥಳ ಪರಿಶೀಲನೆ ನಡೆಸಿದ ಮೇಯರ್ ತಸ್ನೀಂ

ಮೈಸೂರು,ಮಾ.10-ನಗರ ಬಸ್ ನಿಲ್ದಾಣದ ಬಳಿ ಸಬ್ ವೇ ನಿರ್ಮಿಸುವ ಕುರಿತಾಗಿ ಇಂದು ಮೇಯರ್ ತಸ್ನೀಂ ಸ್ಥಳ ಪರಿಶೀಲನೆ ನಡೆಸಿದರು.

ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ನಗರ ಬಸ್ ನಿಲ್ದಾಣದ ಬಳಿ ಅಂದರೆ ಅರಮನೆಯ ಬ್ರಹ್ಮಪುರಿ ದ್ವಾರದ ಬಳಿಯಿಂದ ಜಗನ್ಮೋಹನ ಅರಮನೆ ಕಡೆಯ ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಸಬ್ ವೇ ನಿರ್ಮಿಸುವ ಕುರಿತು ಮೇಯರ್ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ಈ ಬಗ್ಗೆ ಮಾತನಾಡಿರುವ ವಾರ್ಡ್ ನಂ 51ರ ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ನಗರ ಬಸ್ ನಿಲ್ದಾಣದ ಬಳಿ ಸಬ್ ವೇ ಮಾಡಬೇಕೆಂದು ಕಳೆದ ಮೂರು ನಾಲ್ಕು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದೆ. ಆದರೆ ಯಾವ ಮೇಯರ್ ಈ ಬಗ್ಗೆ ಗಮನಹರಿಸಿರಲಿಲ್ಲ. ಮೇಯರ್ ತಸ್ನೀಂ ಅವರಿಗೆ ಈ ಬಗ್ಗೆ ಮನವಿ ಮಾಡಿದ್ದೆ. ಇದಕ್ಕೆ ಸ್ಪಂದಿಸಿದ ಅವರು ಇಂದು ಸ್ಥಳ ಪರಿಶೀಲನೆ ಮಾಡಿದ್ದಾರೆ ಎಂದರು.

ಅಲ್ಲದೆ, ಸಂಚಾರ ಪೊಲೀಸರ ಪ್ರಕಾರ ಡಿ.ಬನುಮಯ್ಯ, ಮರಿಮಲ್ಲಪ್ಪ, ಸದ್ವಿದ್ಯಾ, ಮಹಾರಾಣಿ ಕಾಲೇಜಿನ ಸುಮಾರು 1500 ವಿದ್ಯಾರ್ಥಿಗಳು ದಿನನಿತ್ಯ ಕಾಲೇಜಿಗೆ ಹೋಗಿ ಬರುವಾಗ ರಸ್ತೆ ದಾಟುತ್ತಾರೆ. ಈ ಪ್ರದೇಶದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ರಸ್ತೆ ದಾಟುವುದು ಕಷ್ಟವಾಗುತ್ತಿದೆ. ಹೀಗಾಗಿ ಇಲ್ಲಿ ಸಬ್ ವೇ ನಿರ್ಮಾಣವಾಗಬೇಕು ಎಂದಿರುವ ಅವರು, ಈ ಬಾರಿ ನಗರಪಾಲಿಕೆ ಬಜೆಟ್ ನಲ್ಲಿ ಇದಕ್ಕಾಗಿ 3 ಕೋಟಿ ರೂ. ಮೀಸಲಿಡಬೇಕೆಂದು ಕೋರಿದ್ದೇನೆ. ಮೇಯರ್ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದು, ಕಾದು ನೋಡಬೇಕಿದೆ ಎಂದರು.

ಸ್ಥಳ ಪರಿಶೀಲನೆ ವೇಳೆ ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಇಂಜಿನಿಯರ್ ಸಂತೋಷ್, ಅಭಿವೃದ್ಧಿ ಅಧಿಕಾರಿ ಭರತ್ ಇದ್ದರು. (ಎಚ್.ಎನ್, ಎಂ.ಎನ್)

 

Leave a Reply

comments

Related Articles

error: